ವಿಶ್ವೇಶ್ವರಯ್ಯ ತಾಂತ್ರಿಕ ವಿ.ವಿ: 64 ಸಿಬ್ಬಂದಿಗಳಿಗೆ ನೋಟಿಸ್ ಜಾರಿ
ಬೆಳಗಾವಿ/ಬೆಂಗಳೂರು, ಜು.10: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ನೇಮಕ ಮಾಡಿಕೊಂಡಿದ್ದ 168 ಬೋಧಕ ಸಿಬ್ಬಂದಿಗಳ ಪೈಕಿ 64 ಸಿಬ್ಬಂದಿಗಳ ವಿರುದ್ಧ ಅಕ್ರಮದ ಆರೋಪ ಕೇಳಿಬಂದಿದ್ದು, ಅವರಿಗೆ ವಿವರಣೆ ಕೋರಿ ನೋಟಿಸ್ ಜಾರಿ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಪ್ರೊಫೆಸರ್, ಸಹಾಯಕ ಪ್ರೊಫೆಸರ್ ಮತ್ತು ಅಸೊಸಿಯೇಟ್ ಪ್ರೊಫೆಸರ್ ದರ್ಜೆಯ ಹುದ್ದೆಗಳನ್ನು ಐದು ವರ್ಷಗಳ ಹಿಂದೆ ಕುಲಪತಿ ಡಾ.ಎಚ್.ಮಹೇಶಪ್ಪ ನೇಮಕ ಮಾಡಿಕೊಂಡಿದ್ದರು. ಆದರೆ, ಇವರಲ್ಲಿ 64 ಮಂದಿ ಅನರ್ಹರು ಎಂಬ ಆರೋಪ ಕೇಳಿಬಂದಿದೆ.
ಮಹೇಶಪ್ಪಅವಧಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮ ನೇಮಕಾತಿ ಕುರಿತು ತನಿಖೆಗಾಗಿ ಗೌವರ್ನರ್ ರಚಿಸಿದ್ದ ನ್ಯಾಯಮೂರ್ತಿ ಕೇಶವನಾರಾಯಣ ಸಮಿತಿ ವರದಿಯಲ್ಲೂ ಇದು ಕಂಡುಬಂದಿತ್ತು. ಈ ಹಿನ್ನೆಲೆಯಲ್ಲಿ ವಿಟಿಯು ಕಾರ್ಯಕಾರಿ ಸಮಿತಿ ಮತ್ತೊಂದು ಸಮಿತಿಯನ್ನು ರಚಿಸಿತ್ತು . ಈ ಸಮಿತಿ 164 ಅಭ್ಯರ್ಥಿಗಳ ದಾಖಲಾತಿಗಳನ್ನು ಪರಿಶೀಲನೆ ನಡೆಸಿದ್ದು, 64 ಸಿಬ್ಬಂದಿಗಳು ನಿಯಮ ಉಲ್ಲಂಘಿಸಿರುವುದನ್ನು ಪತ್ತೆ ಮಾಡಿದೆ. ಕೆಲವರು ಸುಳ್ಳು ಮೀಸಲಾತಿ ಹಾಗೂ ಅಕಾಡೆಮಿಕ್ ವಿಚಾರವಾಗಿಯೂ ಸುಳ್ಳು ಮಾಹಿತಿ ನೀಡಿರುವುದನ್ನು ವಿವಿಯಿಂದ ಸ್ಥಾಪನೆ ಆಗಿದ್ದ ನೇಮಕಾತಿ ಪರಿಶೀಲನಾ ತಂಡವೂ ಕಂಡುಹಿಡಿದಿದೆ. ಆ ಹುದ್ದೆಗೆ ಸರಿ ಸಮಾನವಾದ ವಿದ್ಯಾರ್ಹತೆ ಇಲ್ಲದಿದ್ದರೂ ನೇಮಕ ಮಾಡಲಾಗಿದೆ. ಇಂತಹ 64 ಪ್ರಕರಣಗಳ ಬಗ್ಗೆ ವರದಿ ನೀಡಿರುವುದಾಗಿ ಸಮಿತಿಯ ಸದಸ್ಯರೊಬ್ಬರು ಹೇಳಿಕೆ ನೀಡಿದ್ದಾರೆ.
64 ಸಿಬ್ಬಂದಿಗಳು 15 ದಿನಗಳೊಳಗೆ ವಿವರಣೆ ನೀಡುವಂತೆ ವಿಶ್ವವಿದ್ಯಾಲಯ ಹೇಳಿದೆ. ಮುಂದಿನ ಕ್ರಮಕ್ಕಾಗಿ ಕಾರ್ಯಕಾರಿ ಸಮಿತಿ ಮುಂದೆ ನಿಲ್ಲಿಸಲಾಗುತ್ತದೆ. ತರಬೇತಿ ಪರಿಶೀಲನಾ ಸಮಿತಿ ವರದಿ ಆಧಾರದ ಮೇಲೆ ನೋಟಿಸ್ ಜಾರಿಗೊಳಿಸಲಾಗಿದೆ. ಕಾರ್ಯಕಾರಿ ಸಮಿತಿಯಿಂದ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ವಿವಿ ರಿಜಿಸ್ಟ್ರಾರ್ ತಿಳಿಸಿದ್ದಾರೆ.







