ಪೋಷಕರ ಹತ್ಯೆಗೆ ಸಂಚು ರೂಪಿಸಿದ್ದ ಯುವಕನ ಬಂಧನ

ಬೆಂಗಳೂರು, ಜು.10: ಪ್ರೀತಿಸುತ್ತಿದ್ದ ಯುವತಿಯ ವಿಚಾರದಲ್ಲಿ ಜಗಳವುಂಟಾಗಿದ್ದರಿಂದ ಬೇಸತ್ತು ತಂದೆ-ತಾಯಿಯನ್ನು ಕೊಲೆ ಮಾಡಿ ತಾನು ಆತ್ಮಹತ್ಯೆ ಮಾಡಿಕೊಳ್ಳಲು ಪಿಸ್ತೂಲ್ ಖರೀದಿಸಿದ್ದ ಯುವಕನೊಬ್ಬನನ್ನು ಇಲ್ಲಿನ ಬಸವೇಶ್ವರ ನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ.
ನಗರದ ನಾಗರಬಾವಿಯ ಪಾಪರೆಡ್ಡಿ ಪಾಳ್ಯದ ಶರತ್(25) ಎಂಬಾತ ಬಂಧಿತ ಆರೋಪಿಯಾಗಿದ್ದು, ಈತ ಜಿಮ್ ತರಬೇತುದಾರನಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಬಂಧಿತನು ಪಿಸ್ತೂಲ್ ಖರೀದಿಸಲು ಕಳವು ಮಾಡಿದ್ದ 8.37 ಲಕ್ಷ ಮೌಲ್ಯದ 10 ದುಬಾರಿ ಬೈಕ್‌ಗಳು, 1 ನಾಡ ಪಿಸ್ತೂಲ್, 8 ಜೀವಂತ ಗುಂಡುಗಳು ಹಾಗೂ ಉಪಯೋಗಿಸಿದ 2 ಖಾಲಿ ಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪಶ್ಚಿಮ ವಿಭಾಗದ ಡಿಸಿಪಿ ರವಿ ಚನ್ನಣ್ಣವರ್ ತಿಳಿಸಿದ್ದಾರೆ.
ಶರತ್ ಡಿಪ್ಲೊಮಾ ವ್ಯಾಸಂಗ ಮಾಡಿದ್ದರೂ ಕೆಲಸವಿಲ್ಲದೆ ತಿರುಗಾಡುತ್ತಿದ್ದ. ಸುಲಭವಾಗಿ ಹಣ ಸಂಪಾದಿಸಲು ನಗರದಲ್ಲಿ ದುಬಾರಿ ಬೆಲೆಯ ಬೈಕ್‌ಗಳನ್ನು ನಕಲಿ ಕೀ ಹಾಗೂ ಹ್ಯಾಂಡಲ್ ಲಾಕ್ ಮುರಿದು ಕದಿಯುತ್ತಿದ್ದ ಎನ್ನಲಾಗಿದೆ. ಜು.5 ರಂದು ಕುರುಬರಹಳ್ಳಿ ವೃತ್ತದ ಬಳಿ ಗಸ್ತು ಪೊಲೀಸರು ತಪಾಸಣೆಯಲ್ಲಿದಾಗ ಬೈಕ್ ಕಳ್ಳತನಕ್ಕೆ ಮುಂದಾದಾಗ ಆರೋಪಿಯನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ಆರೋಪಿ ವಿರುದ್ಧ ಕೊಲೆ ಯತ್ನ, ಕಳ್ಳತನ, ಮೋಟಾರ್ ವಾಹನ ಕಾಯ್ದೆ ಹಾಗೂ ಅಕ್ರಮ ಶಸಾಸ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ.







