ಕೊರಿಯಾ ಶಾಂತಿ ಪ್ರಕ್ರಿಯೆಯಲ್ಲಿ ಭಾರತವೂ ಪಾಲುದಾರ: ಪ್ರಧಾನಿ

ಹೊಸದಿಲ್ಲಿ,ಜು.10: ಕೊರಿಯಾ ಪರ್ಯಾಯ ದ್ವೀಪದಲ್ಲಿ ಶಾಂತಿ ಪ್ರಕ್ರಿಯೆಯಲ್ಲಿ ಭಾರತವು ಪಾಲುದಾರನಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಇಲ್ಲಿ ಹೇಳಿದರು. ಇದಕ್ಕೂ ಮುನ್ನ ಅವರು ದಕ್ಷಿಣ ಕೊರಿಯಾದ ಅಧ್ಯಕ್ಷ ಮೂನ್ ಜಾ-ಉನ್ ಅವರೊಂದಿಗೆ ವ್ಯಾಪಕ ಮಾತುಕತೆಗಳನ್ನು ನಡೆಸಿದ್ದು,ಉಭಯ ದೇಶಗಳ ನಡುವೆ ವ್ಯೆಹಾತ್ಮಕ ಸಹಕಾರವನ್ನು ಇನ್ನಷ್ಟು ಗಾಢಗೊಳಿಸುವುದಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿತ್ತು.
ರಕ್ಷಣೆ ಮತ್ತು ಭದ್ರತೆ,ವ್ಯಾಪಾರ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಹಕಾರವನ್ನು ಗಣನೀಯವಾಗಿ ಹೆಚ್ಚಿಸಲು ಉಭಯ ದೇಶಗಳು ಒಪ್ಪಿಕೊಂಡವು ಮತ್ತು ಪ್ರಾದೇಶಿಕ ಶಾಂತಿಗಾಗಿ ಹಾಗೂ ಸಮೂಹ ವಿನಾಶದ ಶಸ್ತ್ರಾಸ್ತ್ರಗಳ ಹರಡುವಿಕೆಯನ್ನು ತಡೆಯಲು ಒಂದಾಗಿ ಶ್ರಮಿಸಲು ನಿರ್ಧರಿಸಿದವು.
ವಿವಿಧ ಕ್ಷೇತ್ರಗಳಲ್ಲಿ ಸಹಕಾರಕ್ಕಾಗಿ ಒಟ್ಟು 10 ಒಪ್ಪಂದಗಳಿಗೆ ಸಹಿ ಹಾಕಿದ ಉಭಯ ದೇಶಗಳು,ಸಮಗ್ರ ಆರ್ಥಿಕ ಪಾಲುದಾರಿಕೆ ಒಪ್ಪಂದವನ್ನು ಮೇಲ್ದರ್ಜೆಗೇರಿಸಲು ಮಾತುಕತೆಗಳಿಗೆ ಅನುಕೂಲಿಸುವ ದಾಖಲೆಗೆ ಅಂಕಿತ ಹಾಕಿದವು.
ಮೂನ್ ಅವರೊಂದಿಗೆ ನಡೆಸಿದ ಜಂಟಿ ಸುದ್ದಿಗೋಷ್ಠಿಯಲ್ಲಿ ಮೋದಿ ಅವರು,ಪಾಕಿಸ್ತಾನದೊಂದಿಗಿನ ಉತ್ತರ ಕೊರಿಯಾದ ಅಣ್ವಸ್ತ್ರ ಪ್ರಸರಣ ನಂಟನ್ನು ಪರೋಕ್ಷವಾಗಿ ಪ್ರಸ್ತಾಪಿಸಿ,ಶಾಂತಿ ಪ್ರಕ್ರಿಯೆಯಲ್ಲಿ ಭಾರತವು ಪಾಲುದಾರನಾಗುವುದಕ್ಕೆ ಇದು ಕಾರಣವಾಗಿದೆ ಎಂದು ತಿಳಿಸಿದರು.
ಉತ್ತರ ಕೊರಿಯಾ ಮತ್ತು ಪಾಕಿಸ್ತಾನಗಳ ನಡುವಿನ ಅಣ್ವಸ್ತ್ರ ಪ್ರಸರಣ ನಂಟಿನ ಕುರಿತು ತನಿಖೆಗೆ ಮತ್ತು ಅದಕ್ಕೆ ಕಾರಣರಾದವರನ್ನು ಉತ್ತರದಾಯಿಯನ್ನಾಗಿಸುವಂತೆ ಭಾರತವು ಆಗ್ರಹಿಸುತ್ತಲೇ ಬಂದಿದೆ.
ಉತ್ತರ ಕೊರಿಯಾ ಮತ್ತು ದಕ್ಷಿಣ ಕೊರಿಯಾ ನಡುವೆ ಇತ್ತೀಚಿನ ಶೃಂಗಸಭೆ ಮತ್ತು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಉತ್ತರ ಕೊರಿಯಾದ ಅಧ್ಯಕ್ಷ ಕಿಮ್ ಜಾಂಗ್ ಉನ್ ಅವರ ನಡುವಿನ ಮಾತುಕತೆಗಳನ್ನು ಪ್ರಸ್ತಾಪಿಸಿದ ಉಭಯ ನಾಯಕರು,ಈ ಬೆಳವಣಿಗೆಗಳು ಕೊರಿಯನ್ ಪರ್ಯಾಯ ದ್ವೀಪದಲ್ಲಿ ಸಂಪೂರ್ಣ ಪರಮಾಣು ನಿಶ್ಶಸ್ತ್ರೀಕರಣ ಮತ್ತು ಶಾಶ್ವತ ಶಾಂತಿ ಹಾಗು ಸ್ಥಿರತೆಗೆ ನೆರವಾಗುತ್ತವೆ ಎಂಬ ಆಶಯ ವ್ಯಕ್ತಪಡಿಸಿದರು.







