ಹನೂರು: ಚೆಸ್ಕಾಂ ಅಧಿಕಾರಿಗಳ ವಿರುದ್ಧ ಪ್ರತಿಭಟನೆ

ಹನೂರು,ಜು.10: ಕ್ಷೇತ್ರದ ರೈತರು ಮತ್ತು ಸಾರ್ವಜನಿಕರ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಚೆಸ್ಕಾಂ ಅಧಿಕಾರಿಗಳು ವಿಫಲವಾಗಿದ್ದಾರೆ ಎಂದು ಆರೋಪಿಸಿ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಳಗದ ವತಿಯಿಂದ ಚೆಸ್ಕಾಂ ಕಚೇರಿ ಮುಂದೆ ಮಂಗಳವಾರ ಪ್ರತಿಭಟನೆ ನಡೆಯಿತು.
ನಂತರ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಕರ್ನಾಟಕ ರಕ್ಷಣಾ ವೇಧಿಕೆ ಸ್ವಾಭಿಮಾನಿ ಬಳಗದ ಅಧ್ಯಕ್ಷ ವಿನೋದ್, ಹನೂರು ಪಟ್ಟಣ ಸೇರಿದಂತೆ ಸುತ್ತ ಮುತ್ತಲಿನ ಗ್ರಾಮೀಣ ಭಾಗಗಳಲ್ಲಿ ಚೆಸ್ಕಾಂ ಅಧಿಕಾರಿಗಳು ಪದೇ ಪದೇ ವಿದ್ಯುತ್ ಕಡಿತಕ್ಕೆ ಮುಂದಾಗಿರುವುದರಿಂದ ಸಾರ್ವಜನಿಕರ ದೈನಂದಿನ ಚಟುವಟಿಕೆಗಳು ಮತ್ತು ವಿದ್ಯಾರ್ಥಿಗಳ ವಿದ್ಯಾಬ್ಯಾಸಕ್ಕೂ ತೊಂದರೆ ಆಗುತ್ತಿದ್ದು, ರೈತರ ಜಮೀನಿಗಳಿಗೆ ನಿಗದಿತ ಸಮಯಕ್ಕೆ ಸಮರ್ಪಕವಾಗಿ ವಿದ್ಯುತ್‍ನ್ನು ಸಹ ಒದಗಿಸುವಲ್ಲಿ ಚೆಸ್ಕಾಂ ಅಧಿಕಾರಿಗಳು ವಿಫಲರಾಗಿದ್ದಾರೆ ಎಂದು ಆರೋಪಿಸಿದರು.
ಮನವಿ ಸಲ್ಲಿಕೆ: ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಎ.ಇ ಪ್ರದೀಪ್ ಬಳಿ ಪ್ರತಿಭಟನಾಕಾರರು ತಮ್ಮ ಸಮಸ್ಯೆಗಳನ್ನು ಬಿಚ್ಚಿಟ್ಟರು. ನಂತರ ಮಾತನಾಡಿದ ಪ್ರದೀಪ್ ಮನವಿ ಪತ್ರದಲ್ಲಿ ಸಲ್ಲಿಸಿದ ತಮ್ಮ ಅಹವಾಲುಗಳ ಪೈಕಿ ಅವುಗಳ ನೈಜ ಸ್ಥಿತಿಗತಿಗಳನ್ನು ಗಮನಿಸಿ ನಂತರ ತುರ್ತಾಗಿ ಆಗಬೇಕಾಗಿರುವ ಸಮಸ್ಯೆಗಳನ್ನು 45 ದಿನದ ಒಳಗೆ ಬಗೆಹರಿಸುವುದಾಗಿ ಭರವಸೆ ನೀಡಿದರು.





