ರೇಸ್ ಕೋರ್ಸ್ ಬದಲಾವಣೆಯಿಂದ ಪ್ರವಾಸೋದ್ಯಮ ಅಭಿವೃದ್ಧಿಯಾಗುವುದಿಲ್ಲ: ಯದುವೀರ್ ಒಡೆಯರ್
ಮೈಸೂರು,ಜು.10: ರೇಸ್ ಕೋರ್ಸ್ ಬದಲಾವಣೆಯಿಂದ ಪ್ರವಾಸೋದ್ಯಮ ಅಭಿವೃದ್ಧಿಯಾಗುವುದಿಲ್ಲ ಎಂದು ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ವಾಗ್ದಾಳಿ ನಡೆಸಿದರು.
ಕಲ್ಯಾಣಿಗಿರಿ ಡಾ.ರಾಜ್‍ಕುಮಾರ್ ರಸ್ತೆಯಲ್ಲಿರುವ ಕಲ್ಯಾಣ ಶ್ರೀಲಕ್ಷ್ಮಿ ವೆಂಕಟರಮಣಸ್ವಾಮಿ ದೇವಸ್ಥಾನ, ಅರಣ್ಯ ಇಲಾಖೆ, ಗೋಪಿನಾಥ ಶಣೈ ಟ್ರಸ್ಟ್ ವತಿಯಿಂದ ಮಂಗಳವಾರ ಹಮ್ಮಿಕೊಂಡಿದ್ದ ಪರಿಸರ ಜಾಗೃತಿ ಕಾರ್ಯಕ್ರಮವನ್ನು ಗಿಡನೆಟ್ಟು ಗಿಡಕ್ಕೆ ನೀರುಣಿಸುವ ಮೂಲಕ ಚಾಲನೆ ನೀಡಿ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು.
ಸಚಿವ ಸಾ.ರಾ.ಮಹೇಶ್ ರೇಸ್ ಕೋರ್ಸ್ ಸ್ಥಳಾಂತರಿಸಲು ಮುಂದಾಗಿರುವ ಕುರಿತು ಮಾತನಾಡಿದ ಅವರು, ಯಾವುದೇ ಕಾರಣಕ್ಕೂ ರೇಸ್ ಕೋರ್ಸ್ ಬದಲಾವಣೆ ಬೇಡ. ರೇಸ್ ಕೋರ್ಸ್‍ಗೆ ತನ್ನದೇ ಆದ ಶತಮಾನದ ಇತಿಹಾಸವಿದೆ. ಪ್ರಾಣಿಗಳ ಮನಸ್ಥಿತಿ ಹಾಗೂ ವಾತಾವರಣಕ್ಕೆ ತಕ್ಕಂತೆಯೇ ಹಿರಿಯರು ಈ ಸ್ಥಳದಲ್ಲಿ ರೇಸ್ ಕೋರ್ಸ್ ನಿರ್ಮಾಣ ಮಾಡಿದ್ದಾರೆ. ಪ್ರವಾಸೋಧ್ಯಮ ಅಭಿವೃದ್ಧಿ ಮಾಡಲು ಸಾಕಷ್ಟು ಕೆಲಸ ಇದೆ. ರೇಸ್ ಕೋರ್ಸ್ ಸ್ಥಳಾಂತರದಿಂದ ಪ್ರವಾಸೋಧ್ಯಮ ಅಭಿವೃದ್ಧಿ ಯಾಗುವುದಿಲ್ಲ ಎಂದು ಹೇಳಿದರು.
ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡುವ ಕುರಿತು ಕೇಳಲಾದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಇಚ್ಛೆ ಇಲ್ಲ. ಕಳೆದ ಚುನಾವಣೆಯಲ್ಲೂ ಕೂಡ ವಿಷಯ ಚರ್ಚೆಯಾಗಿತ್ತು. ರಾಜಕೀಯಕ್ಕೆ ಬರುವ ಆಸಕ್ತಿ ನನಗಿಲ್ಲ ಎಂಬುದನ್ನು ಈಗಾಗಲೇ ಸ್ಪಷ್ಟಪಡಿಸಿದ್ದೇನೆ ಎಂದು ಹೇಳಿದರು.
ಇದಕ್ಕೂ ಮೊದಲು ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು, ದೇಗುಲವನ್ನು ಪ್ಲಾಸ್ಟಿಕ್ ಮುಕ್ತ ಮಾಡಿದರೆ ತುಂಬಾನೇ ಒಳ್ಳೆಯದು. ಪ್ಲಾಸ್ಟಿಕ್ ನಿಂದ ದೇಗುಲಕ್ಕೆ ಯಾವುದೇ ರೀತಿಯ ಪ್ರಯೋಜನ ಇಲ್ಲ. ದೇಗುಲ ಪ್ಲಾಸ್ಟಿಕ್ ಮುಕ್ತವಾಗಬೇಕೆಂಬುದು ನನ್ನ ವೈಯುಕ್ತಿಕ ಅಭಿಪ್ರಾಯ ಎಂದರು. ಸಮಾಜಕ್ಕೆ ಒಳಿತಾಗುವ ಯಾವುದೇ ಕಾರ್ಯಕ್ರಮ ಇರಲಿ. ಅದಕ್ಕೆ ನಮ್ಮ ಮನೆತನದಿಂದ ಸಹಾಯ-ಸಹಕಾರ ಮಾಡುತ್ತೇವೆ. ಸ್ವಚ್ಛ ಭಾರತದ ಯೋಜನೆಯಲ್ಲೂ ಗಿಡ ನೆಡುವುದನ್ನು ಬಳಸಿಕೊಳ್ಳಬೇಕಿದೆ. ಸ್ವಚ್ಛ ಭಾರತದಲ್ಲಿ ಮುಂದೆ ಲೀಡ್ ಬರಲಿದ್ದೇವೆ. ಎಲ್ಲಾ ಸಮುದಾಯದವರೂ ಸ್ವಚ್ಛತೆ ಬಗ್ಗೆ ಮುಂದೆ ಬರಬೇಕಿದೆ ಎಂದರು.