ಕಾಶ್ಮೀರದ ಬಗ್ಗೆ ವಿಶ್ವಸಂಸ್ಥೆಯ ವರದಿ ಪೂರ್ವಾಗ್ರಹ ಪೀಡಿತ: ಭಾರತ
ವಿಶ್ವಸಂಸ್ಥೆ, ಜು.10: ಕಾಶ್ಮೀರದ ಬಗ್ಗೆ ವಿಶ್ವಸಂಸ್ಥೆಯ ಮಾನವಹಕ್ಕು ಸಮಿತಿಯ ವರದಿ ಸಂಪೂರ್ಣ ಪಕ್ಷಪಾತದಿಂದ ಕೂಡಿದ್ದು ಇದು ಪರಿಶೀಲನೆಗೂ ಯೋಗ್ಯವಲ್ಲ ಎಂದು ಈ ಪೂರ್ವಾಗ್ರಹ ಪೀಡಿತ ವರದಿಯನ್ನು ಮಂಡಿಸಿದ ಸಭೆಯಲ್ಲಿದ್ದ ಮಾನವಹಕ್ಕುಗಳ ಸಮಿತಿ ಸದಸ್ಯರು ಅಭಿಪ್ರಾಯಪಟ್ಟಿದ್ದರು ಎಂದು ಭಾರತ ತಿಳಿಸಿದೆ.
ಕಾಶ್ಮೀರದ ಕುರಿತ ವರದಿಯ ಬಗ್ಗೆ ವಿಶ್ವಸಂಸ್ಥೆಯ ಭದ್ರತಾ ಸಮಿತಿಯಲ್ಲಿ ಪ್ರಸ್ತಾವಿಸಿದ ಪಾಕಿಸ್ತಾನದ ಕ್ರಮಕ್ಕೆ ತೀವ್ರ ಪ್ರತಿಕ್ರಿಯೆ ನೀಡಿದ ಭಾರತ, ವಿಶ್ವಸಂಸ್ಥೆಯಲ್ಲಿ ಚರ್ಚೆಯಿಂದ ಹೊರಗಿನ ವಿಷಯಗಳನ್ನು ಪ್ರಸ್ತಾವಿಸುವ ಮೂಲಕ ಪಾಕಿಸ್ತಾನ ವಿಶ್ವಸಂಸ್ಥೆಯ ವೇದಿಕೆಯನ್ನು ಮತ್ತೊಮ್ಮೆ ದುರುಪಯೋಗಪಡಿಸಿಕೊಂಡಿದೆ ಎಂದು ತಿರುಗೇಟು ನೀಡಿದೆ.
ಭದ್ರತಾ ಸಮಿತಿ ಸಭೆಯಲ್ಲಿ ಮಕ್ಕಳ ಮತ್ತು ಸಶಸ್ತ್ರ ಸಂಘರ್ಷದ ಕುರಿತು ನಡೆಯುತ್ತಿದ್ದ ಚರ್ಚೆಯ ಸಂದರ್ಭ ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನದ ಕಾಯಂ ಪ್ರತಿನಿಧಿಯಾಗಿರುವ ಮಲೀಹಾ ಲೋಧಿ ಜೂನ್ 14ರ ವಿಶ್ವಸಂಸ್ಥೆ ವರದಿಯನ್ನು ಪ್ರಸ್ತಾವಿಸಿದರು. ಇದಕ್ಕೆ ತೀವ್ರವಾಗಿ ಪ್ರತಿಕ್ರಿಯೆ ನೀಡಿದ ವಿಶ್ವಸಂಸ್ಥೆಯಲ್ಲಿ ಭಾರತದ ಸಹಾಯಕ ಕಾಯಂ ಪ್ರತಿನಿಧಿ ತನ್ಮಯ ಲಾಲ್, ಭಾರತದ ರಾಜ್ಯವಾದ ಜಮ್ಮು-ಕಾಶ್ಮೀರದ ಕುರಿತಾಗಿದೆ ಎಂದು ಹೇಳಲಾಗಿರುವ ವರದಿಯು, ಪರಿಶೀಲನೆ ನಡೆಸದೆ ಸಂಗ್ರಹಿಸಿದ ಮಾಹಿತಿಯನ್ನು ಆಧರಿಸಿದ, ಯಾವುದೇ ಅಧಿಕೃತ ಆದೇಶವಿಲ್ಲದೆ ಅಧಿಕಾರಿಯೊಬ್ಬರು ಕಾರ್ಯನಿರ್ವಹಿಸಿ ರೂಪಿಸಿದ ಪಕ್ಷಪಾತ ಧೋರಣೆಯ ವರದಿಯಾಗಿದೆ ಎಂದು ತಿಳಿಸಿದರು.







