ತುಮಕೂರು: ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಅಂಗನವಾಡಿ ಕಾರ್ಯಕರ್ತೆಯರ ಧರಣಿ
ತುಮಕೂರು,ಜು.10: ಐಸಿಡಿಎಸ್ ಯೋಜನೆ ಅನುದಾನ ಕಡಿತ, ಯೋಜನೆಯ ಖಾಸಗೀಕರಣ, ಖಾಸಗಿ ಎಲ್.ಕೆ.ಜಿ, ಯುಕೆಜಿ ತೆರೆಯಲು ವಿರೋಧಿಸಿ, ಕನಿಷ್ಠ ವೇತನ, ಖಾತ್ರಿ ಪಿಂಚಿಣಿಗೆ ಆಗ್ರಹಿಸಿ ಅಂಗನವಾಡಿ ಕಾರ್ಯಕರ್ತೆಯರು ಅಂಗನವಾಡಿ ಬಂದ್ ಮಾಡಿ ಸಿಐಟಿಯು ನೇತೃತ್ವದಲ್ಲಿ ಮಂಗಳವಾರ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.
ನಗರದ ಟೌನ್‍ಹಾಲ್ ವೃತ್ತದಲ್ಲಿ ಸಮಾವೇಶಗೊಂಡ ಸಾವಿರಾರು ಅಂಗನವಾಡಿ ಕಾರ್ಯಕರ್ತೆಯರು ನಗರದ ಅಶೋಕ ರಸ್ತೆಯಲ್ಲಿ ಮೆರವಣಿಗೆ ನಡೆಸಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ಧರಣಿ ನಡೆಸಿದರು. ಈ ಸಂದರ್ಭದಲ್ಲಿ ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿದ ಅಂಗನವಾಡಿ ನೌಕರರ ಸಂಘದ ಜಿಲ್ಲಾಧ್ಯಕ್ಷೆ ಜಿ.ಕಮಲ, ಐಸಿಡಿಎಸ್ ಯೋಜನೆಗೆ ಕಳೆದ 2010 ರಿಂದ ಕೇಂದ್ರ ಸರಕಾರ ಒಂದು ನಯಾ ಪೈಸೆ ಅನುದಾನವನ್ನು ಹೆಚ್ಚಳ ಮಾಡಿಲ್ಲ. ಆದರೆ ಮಾತೃಪೂರ್ಣ, ಇನ್ನಿತರ ಹೊಸ ಯೋಜನೆಗಳನ್ನು ಮಾತ್ರ ಅಂಗನವಾಡಿಗಳಿಗೆ ನೀಡುತ್ತಲೇ ಬಂದಿದೆ. ಒಂದು ಮಾತೃಪೂರ್ಣ ಯೋಜನೆಯ ಕಡತಕ್ಕೆ ಕನಿಷ್ಠ 300 ರೂ ಗೌರವಧನ ನೀಡಬೇಕು ಎಂದು ಒತ್ತಾಯಿಸಿದರು.
ಕರ್ನಾಟಕದಲ್ಲಿ ಅಂಗನವಾಡಿ ಕಾರ್ಯಕರ್ತೆಯರಿಗೆ ಕನಿಷ್ಠ 18000 ರೂ ವೇತನ ನೀಡಬೇಕೆಂಬುದು ನಮ್ಮ ಬೇಡಿಕೆಯಾಗಿದೆ. ನೆರೆಯ ಕೇರಳ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ,ಗೋವಾ, ಪಾಂಡಿಚೇರಿಗಳಲ್ಲಿ ಕನಿಷ್ಠ ವೇತನ 11 ರಿಂದ 12 ಸಾವಿರವಿದೆ. ಅಲ್ಲದೆ ಖಾತ್ರಿ ಪಿಂಚಿಣಿ ಯೋಜನೆಯನ್ನು ಜಾರಿಗೆ ತರಬೇಕೆಂದು ಆಗ್ರಹಿಸಿದರು.
ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರುಗಳಿಗೆ ರಜೆ ಮಂಜೂರು, ಸಭೆ, ಸಮಾರಂಭಗಳಿಗೆ ಭಾಗವಹಿಸಲು ಅನುಮತಿ ನೀಡಲು ಬಾಲವಿಕಾಸ ಸಮಿತಿಯ ಅಧ್ಯಕ್ಷರಿಗೆ ನೀಡಲಾಗಿದೆ. ಇದನ್ನು ಕೂಡಲೇ ಹಿಂಪಡೆಯಬೇಕು. ಹಾಗಾದಾಗ ಮಾತ್ರ ಶೂನ್ಯ ಜಂಟಿ ಖಾತೆ ತೆರೆಯಲು ನಮ್ಮ ಒಪ್ಪಿಗೆ ಇದೆ ಎಂದ ಅವರು, ಖಾಸಗಿ ಶಾಲೆಗಳ ರೀತಿ ಸರಕಾರಿ ಶಾಲೆಗಳಲ್ಲಿಯೂ ಎಲ್.ಕೆ.ಜಿ. ಮತ್ತು ಯು.ಕೆ.ಜಿ.ತೆರೆದರೆ, ಅಂಗನವಾಡಿಗಳು ಮುಚ್ಚುವ ಸ್ಥಿತಿ ತಲುಪಲಿವೆ. ಆದ್ದರಿಂದ ಅಂಗನವಾಡಿಗಳನ್ನೇ ಮೇಲ್ದರ್ಜೆಗೇರಿಸಿ, ಅಲ್ಲಿನ ಸಿಬ್ಬಂದಿಗೆ ಅಗತ್ಯ ತರಬೇತಿ ನೀಡಿ, ಪೂರ್ವ ಪ್ರಾಥಮಿಕ ಶಾಲೆ ನಡೆಯುವಂತೆ ಸರಕಾರ ಮಾಡಬೇಕೆಂದು ಒತ್ತಾಯಿಸಿದರು.
ಅಂಗನವಾಡಿ ಕಾರ್ಯಕರ್ತೆಯರ ಗೌರವಧನ ಪ್ರತಿ ತಿಂಗಳು ಪಾವತಿಯಾಗುವ ಬದಲು 5 ತಿಂಗಳಾದರೂ ಪಾವತಿ ಯಾಗಿಲ್ಲ. ಪ್ರತಿ ತಿಂಗಳು 5ನೇ ತಾರೀಖಿನ ಒಳಗೆ ಗೌರವಧನ ಎಲ್ಲರಿಗೂ ದೊರೆಯುವಂತೆ ಮಾಡಬೇಕು. ಮೆಲ್ವೀಚಾರಕಿಯರ ನೇಮಕದಲ್ಲಿ ಅಂಗನವಾಡಿ ಕಾರ್ಯಕರ್ತೆಯರಿಗೆ ನಿಯಮದಂತೆ ಮೀಸಲಾತಿ ನೀಡಬೇಕು. ಮಿನಿ ಅಂಗನವಾಡಿಯಲ್ಲಿ ಕಾರ್ಯನಿರ್ವಹಿಸುವ ಸಹಾಯಕಿಯರಿಗೆ ಅಂಗನವಾಡಿ ಕಾರ್ಯಕರ್ತೆಯರಿಗೆ ನೀಡುವಷ್ಟೇ ಗೌರವ ಧನ ನಿಗಧಿ ಮಾಡಬೇಕೆಂದು ಆಗ್ರಹಿಸಿದರು.
ಪ್ರತಿಭಟನೆಯ ನಂತರ ಜಿಲ್ಲಾಧಿಕಾರಿ ಡಾ.ಆರ್.ವಿಶಾಲ್ ಅವರ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಿದರು. ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿಗಳು ಮನವಿಯನ್ನು ಸರ್ಕಾರಕ್ಕೆ ಕಳುಹಿಸಿಕೊಡಲಾಗುವುದು ಎಂದು ತಿಳಿಸಿದರು.
ಪ್ರತಿಭಟನೆಯಲ್ಲಿ ಅಂಗನವಾಡಿ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಗುಲ್ಜಾರ್ ಭಾನು, ಉಪಾಧ್ಯಕ್ಷೆ ಎಸ್.ಡಿ.ಪಾವರ್ತಮ್ಮ, ಸಿಐಟಿಯು ಜಿಲ್ಲಾಧ್ಯಕ್ಷ ಸೈಯದ್ ಮುಜೀಬ್ ಸೇರಿದಂತೆ ಸಾವಿರಾರು ಅಂಗನವಾಡಿ ಕಾರ್ಯಕರ್ತೆಯರು ಪಾಲ್ಗೊಂಡಿದ್ದರು.