ದಾಖಲೆರಹಿತ ಪ್ರದೇಶಗಳನ್ನು ಕಂದಾಯ ಗ್ರಾಮಗಳನ್ನಾಗಿ ಪರಿವರ್ತಿಸಲು ಆದೇಶ: ಸಚಿವ ದೇಶಪಾಂಡೆ

ಬೆಂಗಳೂರು, ಜು.11: ರಾಜ್ಯಾದ್ಯಂತ ಗೊಲ್ಲರಹಟ್ಟಿಗಳು ಸೇರಿದಂತೆ ದಾಖಲೆರಹಿತ ಜನವಸತಿ ಪ್ರದೇಶಗಳಾದ ವಡ್ಡರಹಟ್ಟಿ, ಕುರುಬರಹಟ್ಟಿ, ಮಜರೆ, ಹಾಡಿ, ದೊಡ್ಡಿ, ಪಾಳ್ಯ, ಕ್ಯಾಂಪ್ ಕಾಲನಿ ಇತ್ಯಾದಿಗಳನ್ನು ಕಂದಾಯ ಗ್ರಾಮಗಳನ್ನಾಗಿ ಪರಿವರ್ತಿಸಲು ಮಾ.2016 ರಲ್ಲಿ ಸರಕಾರಿ ಆದೇಶ ಹೊರಡಿಸಲಾಗಿದೆ ಎಂದು ಕಂದಾಯ ಸಚಿವ ಆರ್.ವಿ. ದೇಶಪಾಂಡೆ ತಿಳಿಸಿದ್ದಾರೆ.
ಬುಧವಾರ ವಿಧಾನ ಪರಿಷತ್‌ನಲ್ಲಿ ಪ್ರಶ್ನೋತ್ತರ ಅವಧಿಯಲ್ಲಿ ಜಯಮ್ಮ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಸದರಿ ಆದೇಶದಂತೆ ವಿವಿಧ ಜಿಲ್ಲಾಧಿಕಾರಿಗಳಿಂದ ಒಟ್ಟು 2323 ಪ್ರಾಥಮಿಕ ಅಧಿಸೂಚನೆ ಪ್ರಸ್ತಾವನೆಗಳು ಸ್ವೀಕೃತವಾಗಿವೆ. ಇದುವರೆಗೆ ಒಟ್ಟು 1369 ಪ್ರಕರಣಗಳಲ್ಲಿ ಪ್ರಾಥಮಿಕ ಅಧಿಸೂಚನೆ ಮತ್ತು 672 ಪ್ರಕರಣಗಳಲ್ಲಿ ಅಂತಿಮ ಅಧಿಸೂಚನೆಗಳನ್ನು ಹೊರಡಿಸಲಾಗಿದೆ ಎಂದು ತಿಳಿಸಿದರು.
ಅರ್ಹವಿರುವ ದಾಖಲೆರಹಿತ ಜನವಸತಿ ಪ್ರದೇಶಗಳನ್ನು ಕಂದಾಯ ಗ್ರಾಮಗಳನ್ನಾಗಿ ಪರಿವರ್ತಿಸಲು ಜಿಲ್ಲಾಧಿಕಾರಿಗಳಿಂದ ಪ್ರಸ್ತಾವನೆಗಳು ಸ್ವೀಕೃತವಾಗುತ್ತಿವೆ. ದಾಖಲೆ ರಹಿತ ಜನವಸತಿಗಳಲ್ಲಿನ ನಿವಾಸಿಗಳಿಗೆ ಹಕ್ಕು ದಾಖಲೆಗಳನ್ನು ನೀಡುವ ಸಂಬಂಧ ಕರ್ನಾಟಕ ಭೂ ಕಂದಾಯ ಕಾಯ್ದೆ 1964 ರ ಕಲಂ 94ಕ್ಕೆ ಕರ್ನಾಟಕ ಭೂ ಸುಧಾರಣಾ ಕಾಯ್ದೆ 1961 ರ ಕಲಂ 38ಕ್ಕೆ ತಿದ್ದುಪಡಿಗಳನ್ನು ತಂದು ನಿಯಮಗಳನ್ನು ರೂಪಿಸಲಾಗಿದೆ. ಅದರಂತೆ ಅಂತಿಮ ಅಧಿಸೂಚನೆ ಹೊರಡಿಸಿರುವ ದಾಖಲೆ ರಹಿತ ಜನವಸತಿಗಳಲ್ಲಿನ ನಿವಾಸಿಗಳಿಗೆ ಹಕ್ಕುದಾಖಲೆಗಳನ್ನು ನೀಡಲು ನಿಯಮಾನುಸಾರ ಕ್ರಮ ವಹಿಸುವಂತೆ ಎಲ್ಲ ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದು, ಕಾರ್ಯವು ಪ್ರಗತಿಯಲ್ಲಿದೆ. ಇದುವರೆಗೆ 672 ಪ್ರಕರಣಗಳಲ್ಲಿ ಅಂತಿಮ ಅಧಿಸೂಚನೆಗಳನ್ನು ಹೊರಡಿಸಲಾಗಿದೆ ಎಂದು ತಿಳಿಸಿದರು.







