ಭೂಕುಸಿತಕ್ಕೆ 8 ಮಕ್ಕಳು, ಓರ್ವ ಮಹಿಳೆ ಬಲಿ

ಇಂಫಾಲ, ಜು. 11: ಮಣಿಪುರದ ತಮೆಂಗ್‌ಲಾಂಗ್ ಜಿಲ್ಲೆಯಲ್ಲಿ ಸುರಿಯುತ್ತಿರುವ ಭಾರೀ ಮಳೆಗೆ ಬುಧವಾರ ವಿವಿಧ ಸ್ಥಳಗಳಲ್ಲಿ ಭೂಕುಸಿತ ಸಂಭವಿಸಿದ್ದು, 8 ಮಕ್ಕಳು ಹಾಗೂ ಓರ್ವ ಮಹಿಳೆ ಮೃತಪಟ್ಟಿದ್ದಾರೆ.
ಇಬ್ಬರು ಮಕ್ಕಳ ಮೃತದೇಹಗಳನ್ನು ಇನ್ನಷ್ಟೇ ಪತ್ತೆ ಮಾಡಬೇಕಾಗಿದೆ ಎಂದು ಉಪ ಆಯುಕ್ತ ರವೀಂದರ್ ಸಿಂಗ್ ತಿಳಿಸಿದ್ದಾರೆ. ಇಂಫಾಲದಿಂದ 150 ಕಿ.ಮೀ. ಪಶ್ಚಿಮದಲ್ಲಿರುವ ತಮೆಂಗ್‌ಲಾಂಗ್ ಜಿಲ್ಲೆಯ ವಿವಿಧ ಪ್ರದೇಶಗಳಲ್ಲಿ ಬುಧವಾರ ಮುಂಜಾನೆ 2ರಿಂದ 3 ಗಂಟೆ ನಡುವೆ ಭೂಕುಸಿತ ಸಂಭವಿಸಿದೆ ಎಂದು ಮೂಲಗಳು ತಿಳಿಸಿವೆ. ಕಳೆದ ಮೂರ್ನಾಲ್ಕು ದಿನಗಳಿಂದ ಎಡೆಬಿಡದೆ ಧಾರಾಕಾರವಾಗಿ ಮಳೆ ಸುರಿಯುತ್ತಿರುವುದರಿಂದ ಈ ದುರ್ಘಟನೆ ಸಂಭವಿಸಿದೆ. ನಾಪತ್ತೆಯಾಗಿ ರುವ ಇಬ್ಬರು ಮಕ್ಕಳ ಮೃತದೇಹಗಳಿಗಾಗಿ ನಾವು ಹುಡುಕಾಟ ನಡೆಸುತ್ತಿದ್ದೇವೆ ಎಂದು ಉಪ ಆಯುಕ್ತರು ತಿಳಿಸಿದ್ದಾರೆ. ಮೃತಪಟ್ಟವರು ತಮೆಂಗ್‌ಲಾಂಗ್ ಸಮೀಪದ ರಮೈಲಾಂಗ್, ನೈಗೈ ಲಾಂಗ್ ಹಾಗೂ ನ್ಯೂ ಸಲೇಂನ ಮೂರು ಕುಟುಂಬಕ್ಕೆ ಸೇರಿದವರು. ಭೂಕುಸಿತ ಸಂಭವಿಸುವಾಗ ಎಲ್ಲರೂ ನಿದ್ರೆ ಮಾಡುತ್ತಿದ್ದರು ಎಂದು ಅವರು ತಿಳಿಸಿದ್ದಾರೆ.





