ಚಿಕ್ಕೋಡಿ-ಗೋಕಾಕ್ ಜಿಲ್ಲೆ ಘೋಷಣೆಗೆ ಸತೀಶ್ ಜಾರಕಿಹೊಳಿ ಒತ್ತಾಯ

ಬೆಂಗಳೂರು, ಜು.11: ಬೆಳಗಾವಿ ಜಿಲ್ಲೆಯೂ ಭೌಗೋಳಿಕವಾಗಿ ವಿಶಾಲ ಪ್ರದೇಶವನ್ನು ಹೊಂದಿದೆ. ಸಮ್ಮಿಶ್ರ ಸರಕಾರವು ಆಡಳಿತಾತ್ಮಕ ದೃಷ್ಟಿಯಿಂದ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಹಾಗೂ ಗೋಕಾಕ್ ತಾಲೂಕುಗಳನ್ನು ಜಿಲ್ಲೆಗಳನ್ನಾಗಿ ಘೋಷಿಸುವಂತೆ ಕಾಂಗ್ರೆಸ್ ಶಾಸಕ ಸತೀಶ್ ಜಾರಕಿಹೊಳಿ ಒತ್ತಾಯಿಸಿದರು.
ಬುಧವಾರ ವಿಧಾನಸಭೆಯಲ್ಲಿ ಬಜೆಟ್ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ರಾಜ್ಯದ ಬಜೆಟ್ ಗಾತ್ರವು 2.18 ಲಕ್ಷ ಕೋಟಿ ರೂ.ಗಳಾಗಿದೆ. ಸರಕಾರ ರೈತರ 34 ಸಾವಿರ ಕೋಟಿ ರೂ.ಸಾಲ ಮನ್ನಾ ಮಾಡುವ ತೀರ್ಮಾನ ಕೈಗೊಂಡಿದ್ದು ಅಭಿನಂದನಾರ್ಹ ಎಂದರು. ಸಮಾಜ ಕಲ್ಯಾಣ ಇಲಾಖೆಯಲ್ಲಿ ಸಾಕಷ್ಟು ಹಣವಿದೆ. ಸರಕಾರಿ ಶಾಲಾ ಕಟ್ಟಡಗಳ ದುರಸ್ತಿಗಾಗಿ ಒಂದು ಸಾವಿರ ಕೋಟಿ ರೂ.ಗಳನ್ನು ಮೀಸಲಿಟ್ಟು, ಪ್ರತಿಯೊಂದು ವಿಧಾನಸಭಾ ಕ್ಷೇತ್ರಕ್ಕೆ 4 ಕೋಟಿ ರೂ.ಗಳಂತೆ ಹಂಚಿಕೆ ಮಾಡಿದರೆ ಎಲ್ಲ ಶಾಲೆಗಳನ್ನು ಏಕಕಾಲದಲ್ಲಿ ದುರಸ್ತಿಗೊಳಿಸಬಹುದಾಗಿದೆ ಎಂದು ಅವರು ಹೇಳಿದರು.
ಶಾಲಾ ಶಿಕ್ಷಕರ ಕೊರತೆ ಇರುವುದರಿಂದ, ಹೊಸದಾಗಿ ಶಿಕ್ಷಕರ ನೇಮಕವಾಗುವವರೆಗೆ ನಿವೃತ್ತಿ ಹೊಂದುತ್ತಿರುವ ಶಿಕ್ಷಕರ ಸೇವಾ ಅವಧಿಯನ್ನು ವಿದ್ಯಾರ್ಥಿಗಳ ಭವಿಷ್ಯದ ಹಿತದೃಷ್ಟಿಯಿಂದ ಎರಡು ವರ್ಷಗಳ ಕಾಲ ವಿಸ್ತರಣೆ ಮಾಡಬೇಕು ಎಂದು ಸತೀಶ್ ಜಾರಕಿಹೊಳಿ ಮನವಿ ಮಾಡಿದರು.
ಶಿಕ್ಷಣ ಕ್ಷೇತ್ರಕ್ಕೆ ನಾವು ಖರ್ಚು ಮಾಡುತ್ತಿದ್ದೇವೆ. ಆದರೆ, ಉದ್ಯೋಗ ಸೃಷ್ಟಿಯತ್ತ ನಿರೀಕ್ಷಿತ ಗಮನ ಕೊಡುತ್ತಿಲ್ಲ. ಉದ್ಯಮಗಳ ಸ್ಥಾಪನೆಗೆ ನಿಯಮಗಳನ್ನು ಸರಳೀಕರಣ ಮಾಡಬೇಕು. ಕೈಗಾರಿಕೆಗಳು ಕೇವಲ ಬೆಂಗಳೂರು, ಮೈಸೂರು, ಬೆಳಗಾವಿಗೆ ಸೀಮಿತವಾಗಿರದೆ ತಾಲೂಕು ಮಟ್ಟದಲ್ಲಿ ಉದ್ಯೋಗ ಅವಕಾಶಗಳನ್ನು ಹೆಚ್ಚಿಸಲು ಅವಕಾಶ ಮಾಡಿಕೊಡಬೇಕು. ಕೈಗಾರಿಕೆಗಳ ಸ್ಥಾಪನೆಗೆ ಆನ್‌ಲೈನ್ ಮೂಲಕ ಅನುಮತಿ ನೀಡುವ ಕೆಲಸ ಆಗಬೇಕು ಎಂದು ಅವರು ಹೇಳಿದರು.
ರೈತರು ಬೆಳೆಯುವಂತಹ ಬೆಳೆಗಳಿಗೆ ಸ್ಥಳೀಯವಾಗಿ ಕಾರ್ಖಾನೆಗಳನ್ನು ಮಾಡಬೇಕು. ಕೃಷಿ ಹಾಗೂ ಕೈಗಾರಿಕೆಗೆ ಸಂಬಂಧಪಟ್ಟ ಇಲಾಖೆಗಳು ಒಟ್ಟಾಗಿ ಈ ಯೋಜನೆ ಜಾರಿಗೊಳಿಸಬೇಕು. ಆಯಾ ಜಿಲ್ಲೆಗಳಲ್ಲಿ ಬೆಳೆಯುವ ಬೆಳೆಗಳಿಗೆ ಅಲ್ಲಿಯೇ ಕಾರ್ಖಾನೆಗಳು ಸಿಗುವಂತಾಗಬೇಕು ಎಂದು ಸತೀಶ್ ಜಾರಕಿಹೊಳಿ ತಿಳಿಸಿದರು. ಜನರಿಗೆ ಹೊರೆ ಹೇರಲು ಸರಕಾರ ಮುಂದಾಗುವುದಿಲ್ಲ ಎಂದು ತಮ್ಮಣ್ಣ, ಟಿಕೆಟ್ ದರ ಏರಿಕೆ ಸಂಬಂಧ ಯಾವುದೇ ಚರ್ಚೆ ನಡೆಸಿಲ್ಲ ಎಂದು ಸ್ಪಷ್ಟಣೆ ನೀಡಿದರು.







