ಗದ್ದೆಗಿಳಿದು ನೇಜಿ ನೆಟ್ಟ ನಿಟ್ಟೂರು ಪ್ರೌಢಶಾಲಾ ವಿದ್ಯಾರ್ಥಿಗಳು

ಉಡುಪಿ, ಜು.12: ನಿಟ್ಟೂರು ಪ್ರೌಢಶಾಲೆಯ 10ನೇ ತರಗತಿಯ 62 ಮಂದಿ ವಿದ್ಯಾರ್ಥಿಗಳು ಮಂಗಳವಾರ ಅಪರಾಹ್ನ ಕಕ್ಕುಂಜೆಯ ಸುಮಾರು 40 ಸೆಂಟ್ಸ್ ವಿಸ್ತೀರ್ಣದ ಮೂರು ಗದ್ದೆಗಳಲ್ಲಿ ನೇಜಿ ನೆಟ್ಟು ಸಂಭ್ರಮಿಸಿದರು.
ತರಗತಿಗಳಲ್ಲಿ ಪಾಠಪ್ರವಚನದೊಂದಿಗೆ ವಿದ್ಯಾರ್ಥಿಗಳನ್ನು ಕೆಸರು ಗದ್ದೆಗಳಿಗೆ ಇಳಿಸುವ ಮೂಲಕ ದೇಶಕ್ಕೆ ಅನ್ನ ಕೊಡುವ ರೈತನ ಬದುಕಿನ ನಿಜ ದರ್ಶನ ಮಾಡಿಸುವ ನೇಜಿ ನೆಡುವ ಈ ಕಾರ್ಯಕ್ರಮವನ್ನು ನಿಟ್ಟೂರು ಶಾಲೆ ಕಳೆದ ಕೆಲವು ವರ್ಷಗಳಿಂದ ನಡೆಸಿಕೊಂಡು ಬಂದಿದೆ.
ಕೆಸರು ಮಣ್ಣಿನ ಸಿಂಚನದೊಂದಿಗೆ ಕೃಷಿ ಚಟುವಟಿಕೆಯ ನೇರ ಅನುಭವ ಗಳನ್ನು ವಿದ್ಯಾರ್ಥಿಗಳು ಇಲ್ಲಿ ಪಡೆದದ್ದು ವಿಶಿಷ್ಟವಾಗಿತ್ತು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗಾಗಿ ಕೆಸರುಗದ್ದೆ ಓಟ, ಹಗ್ಗ ಜಗ್ಗಾಟ ಹಾಗೂ ಇತರ ಆಟಗಳನ್ನು ಸಹ ಆಯೋಜಿಸಲಾಗಿದ್ದು, ವಿದ್ಯಾರ್ಥಿಗಳಲ್ಲಿ ಹೊಸ ಚೈತನ್ಯ ತುಂಬಿತು.
ಶಾಲೆಯ ಹಳೆವಿದ್ಯಾರ್ಥಿ ಸುಮಂತ್ ನಾಯ್ಕಾ ಭಾಗವಹಿಸಿದ ವಿದ್ಯಾರ್ಥಿ ಗಳಿಗೆ ಪೆನ್ನಿನ ಕೊಡುಗೆಯನ್ನು ನೀಡಿದರು. ಶಾಲಾ ಮುಖ್ಯೋಪಾಧ್ಯಾಯರಾದ ಮುರಲಿ ಕಡೆಕಾರ್‌ರ ವಿಶೇಷ ಆಸಕ್ತಿ, ಶಿಕ್ಷಕರ ಸಹಕಾರ ವಿದ್ಯಾರ್ಥಿಗಳಿಗೆ ಕೃಷಿ ಚಟುವಟಿಕೆಗಳ ನೇರ ಪ್ರಾಯೋಗಿಕ ಅನುಭವ ಪಡೆಯುವಲ್ಲಿ ಸಫಲ ವಾಯಿತು.





