'ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ, ಉತ್ತರ ಕರ್ನಾಟಕ, ಕರಾವಳಿ ಭಾಗಕ್ಕೆ ಅನ್ಯಾಯ'
ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಶಾಸಕರ ಅಸಮಾಧಾನ

ಬೆಂಗಳೂರು, ಜು. 11: ಕರಾವಳಿ, ಉತ್ತರ ಕರ್ನಾಟಕಕ್ಕೆ ಬಜೆಟ್ ಅನ್ಯಾಯ ಆಗಿದ್ದು, ವಿದ್ಯುತ್, ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಮಾಡಲಾಗಿದೆ. ಹೀಗಾದರೆ ಲೋಕಸಭೆ ಚುನಾವಣೆಯನ್ನು ಪಕ್ಷ ಎದುರಿಸುದಾದರೂ ಹೇಗೇ? ಎಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಶಾಸಕರು ತಮ್ಮ ಅಸಮಾಧಾನವನ್ನು ಹೊರ ಹಾಕಿದ್ದಾರೆ.
ಬುಧವಾರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಶಾಸಕಾಂಗ ಪಕ್ಷದ ನಾಯಕರೂ ಆಗಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಬಜೆಟ್‌ನಲ್ಲಿ ಜೆಡಿಎಸ್ ಪ್ರಾಬಲ್ಯದ ಜಿಲ್ಲೆಗಳಿಗೆ ಆದ್ಯತೆ ನೀಡಲಾಗಿದೆ. ನಮ್ಮ ಕ್ಷೇತ್ರದ ಜನರಿಗೆ ನಾವು ಏನೆಂದು ಉತ್ತರ ನೀಡಬೇಕು ಎಂದು ಪ್ರಶ್ನಿಸಿದ್ದಾರೆ ಎಂದು ಗೊತ್ತಾಗಿದೆ.
ಅನ್ನಭಾಗ್ಯ ಯೋಜನೆಯಡಿ ಅಕ್ಕಿ ಪ್ರಮಾಣ ಕಡಿತ ಮಾಡಿದ್ದು, ಸಾರ್ವಜನಿಕರಿಂದ ಆಕ್ಷೇಪ ವ್ಯಕ್ತವಾಗುತ್ತಿದೆ. ಆದುದರಿಂದ ಬಜೆಟ್ ಅನುಮೋದನೆಗೆ ಮೊದಲು ಇದೆಲ್ಲವನ್ನು ಸರಿಪಡಿಸಬೇಕೆಂದು ಶಾಸಕರು, ಮುಖಂಡರಿಗೆ ಮನವಿ ಮಾಡಿದರು ಎಂದು ತಿಳಿದು ಬಂದಿದೆ.
ಸಭಾಪತಿ ಸ್ಥಾನಕ್ಕೆ ಪಟ್ಟು: ನಮ್ಮ ಪಕ್ಷದ ಸದಸ್ಯರು ಹೆಚ್ಚಿನ ಸ್ಥಾನದಲ್ಲಿದ್ದರೂ ವಿಧಾನ ಪರಿಷತ್ ಸಭಾಪತಿ ಸ್ಥಾನ ನಮ್ಮ ಪಕ್ಷಕ್ಕೆ ನೀಡಬೇಕು. ಯಾವುದೇ ಕಾರಣಕ್ಕೂ ಆ ಸ್ಥಾನವನ್ನು ಜೆಡಿಎಸ್‌ಗೆ ಬಿಟ್ಟು ಕೊಡಬಾರದು. ಈ ಬಗ್ಗೆ ಸಮನ್ವಯ ಸಮಿತಿ ಸಭೆಯಲ್ಲಿ ಸಮಾಲೋಚನೆ ನಡೆಸಬೇಕು ಎಂದು ಮೇಲ್ಮನೆ ಸದಸ್ಯ ಅಬ್ದುಲ್ ಜಬ್ಬಾರ್ ಆಗ್ರಹಿಸಿದ್ದಾರೆಂದು ಹೇಳಲಾಗಿದೆ.
‘ರೈತರ ಸಾಲಮನ್ನಾ ಬೋಗಸ್ ಎಂದು ಜನ ಸಾಮಾನ್ಯರು ಮಾತನಾಡುತ್ತಿದ್ದು, ಬರೀ ಸುಸ್ತಿದಾರರ ಬೆಳೆ ಸಾಲಮನ್ನಾ ಮಾಡಿದರೆ ಒಂದು ವರ್ಗದ ರೈತರಿಗಷ್ಟೇ ಅನುಕೂಲವಾಗಲಿದೆ. ಸಾಲಮನ್ನಾದ ಲಾಭ ಎಲ್ಲ ರೈತರಿಗೆ ಆಗುವುದಿಲ್ಲ. ಎಲ್ಲವನ್ನು ಹಾಸನ, ಮಂಡ್ಯ, ರಾಮನಗರಕ್ಕೆ ಕೊಟ್ಟುಬಿಡಲು ಹೇಳಿ’ ಎಂದು ಹಿರಿಯ ಮುಖಂಡ ಎಚ್.ಕೆ.ಪಾಟೀಲ್ ಆಕ್ರೋಶ ಹೊರ ಹಾಕಿದ್ದಾರೆಂದು ತಿಳಿದು ಬಂದಿದೆ.
ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದ್ದಕ್ಕೆಲ್ಲ ತಲೆ ಅಲ್ಲಾಡಿಸಿದರೆ, ಇದರ ಪರಿಣಾಮ ಏನಾಗುತ್ತದೆ ಎಂಬುದು ನಿಮಗೆ ಗೊತ್ತೆ ಎಂದು ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ವಿರುದ್ಧವೂ ಅಸಮಾಧಾನ ಹೊರಹಾಕಿದ ಶಾಸಕರು, ಕಾಂಗ್ರೆಸ್ ಪಕ್ಷದ ನಿಲುವಿಗೆ ಜೆಡಿಎಸ್ ಕಿಮ್ಮತ್ತು ನೀಡುತ್ತಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ ಎನ್ನಲಾಗಿದೆ.
ಸಿಎಲ್‌ಪಿ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಮಾಜಿ ಸಚಿವ ಎಚ್.ಕೆ. ಪಾಟೀಲ್, ಮುಖ್ಯಮಂತ್ರಿ ಹಾಗೂ ಸಿದ್ದರಾಮಯ್ಯಗೆ ಬರೆದ ಪತ್ರದ ಬಗ್ಗೆ ಇವತ್ತಿನ ಸಭೆಯಲ್ಲಿ ಚರ್ಚೆ ಆಗಿದೆ. ಉತ್ತರ ಕರ್ನಾಟಕ ಹಾಗೂ ಅಲ್ಪಸಂಖ್ಯಾತರಿಗೆ ಬಜೆಟ್‌ನಲ್ಲಿ ಅನ್ಯಾಯವಾಗಿದೆ ಎಂದು ನಮ್ಮ ಅಭಿಪ್ರಾಯವನ್ನು ತಿಳಿಸಿದ್ದೇವೆ ಎಂದರು. ಪಕ್ಷದ ಮುಖಂಡರು ಇದನ್ನು ಗಂಭೀರವಾಗಿ ಪರಿಗಣಿಸಿದ್ದು, ರಾಜ್ಯದ ಸಮಗ್ರ ಅಭಿವೃದ್ಧಿಗೆ ಸೂಕ್ತ ನಿರ್ಧಾರ ಕೈಗೊಳ್ಳಲಿದ್ದಾರೆಂಬ ಭರವಸೆ ಇದೆ. ನನ್ನ ಅನಿಸಿಕೆಯನ್ನು ಬಹುತೇಕ ಶಾಸಕರು ಸಮ್ಮತಿಸಿದ್ದು, ಪೆಟ್ರೋಲ್, ಡೀಸೆಲ್ ಬೆಲೆ ಕಡಿಮೆ ಮಾಡಬೇಕು ಎಂದು ಮನವಿ ಮಾಡಿದ್ದೇವೆ ಎಂದು ಪಾಟೀಲ್ ಹೇಳಿದರು.
ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಡಿಸಿಎಂ ಡಾ.ಜಿ.ಪರಮೇಶ್ವರ್, ಸಚಿವರಾದ ಆರ್.ವಿ.ದೇಶಪಾಂಡೆ, ಕೆ.ಜೆ. ಜಾರ್ಜ್, ಕೃಷ್ಣ ಭೈರೇಗೌಡ, ಪುಟ್ಟರಂಗಶೆಟ್ಟಿ, ಪ್ರಿಯಾಂಕ್ ಖರ್ಗೆ, ಜಯಮಾಲಾ, ರಾಜಶೇಖರ್ ಪಾಟೀಲ್, ಶಾಸಕರಾದ ಹಾರೀಸ್, ತನ್ವೀರ್ ಸೇಠ್, ಸೋಮಶೇಖರ್, ಮೇಲ್ಮನೆ ಸದಸ್ಯರಾದ ಎಚ್.ಎಂ.ರೇವಣ್ಣ, ಐವನ್ ಡಿಸೋಜಾ ಸೇರಿದಂತೆ ಇನ್ನಿತರರು ಹಾಜರಿದ್ದರು.
‘ಮುಂಬರುವ ಲೋಕಸಭೆ ಚುನಾವಣೆ ಸಿದ್ಧತೆ ಬಗ್ಗೆ ಸಮಾಲೋಚನೆ ನಡೆಸಿದ್ದು, ಶಿಸ್ತಿನಿಂದ ಕೆಲಸ ಮಾಡುವ ನಿಟ್ಟಿನಲ್ಲಿ ಶಾಸಕರಿಗೆ ಮಾರ್ಗದರ್ಶನ ಮಾಡಲಾಗಿದೆ. ಸದನದಲ್ಲೂ ಎಲ್ಲರೂ ಭಾಗವಹಿಸಬೇಕೆಂದು ಸೂಚನೆ ನೀಡಿದ್ದೇವೆ. ಶಾಸಕರು ತಮ್ಮ ಕ್ಷೇತ್ರದ ಕಾಮಗಾರಿಗಳ ಬಗ್ಗೆ ಹೇಳಿದ್ದು ಎಲ್ಲರೂ ಒಗ್ಗಟ್ಟಿನಿಂದ ಹೋಗಲು ಸೂಚನೆ ನೀಡಲಾಗಿದೆ. ಸಭಾಪತಿ ನೇಮಕಾತಿ ಬಗ್ಗೆಯೂ ನಿರ್ಧಾರವಾಗಲಿದೆ’
-ಡಿ.ಕೆ.ಶಿವಕುಮಾರ್, ಜಲಸಂಪನ್ಮೂಲ ಸಚಿವ







