ಮೆಟ್ರೋ ಮಾದರಿಯಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆಗೆ ಕ್ರಮ ಕೈಗೊಳ್ಳಲು ಬಸವರಾಜ ಬೊಮ್ಮಾಯಿ ಆಗ್ರಹ

ಬೆಂಗಳೂರು, ಜು.11: ಕೃಷ್ಣಾ ಮೇಲ್ದಂಡೆ ಯೋಜನೆಯ ಮೂರನೆ ಹಂತಕ್ಕೆ 25 ಸಾವಿರ ಕೋಟಿ ರೂ.ಗಳ ಅಗತ್ಯವಿದೆ. ಈ ಯೋಜನೆ ಅನುಷ್ಠಾನಗೊಂಡರೆ 13 ಲಕ್ಷ ಎಕರೆ ಪ್ರದೇಶದಲ್ಲಿ ನೀರಾವರಿ ಸೌಲಭ್ಯ ಒದಗಿಸಬಹುದು ಎಂದು ಬಿಜೆಪಿ ಹಿರಿಯ ಸದಸ್ಯ ಬಸವರಾಜ ಬೊಮ್ಮಾಯಿ ಹೇಳಿದರು.
ಬುಧವಾರ ವಿಧಾನಸಭೆಯಲ್ಲಿ ಬಜೆಟ್ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಬೆಂಗಳೂರು ಮೆಟ್ರೋ ರೈಲು ಯೋಜನೆ ಕೈಗೆತ್ತಿಕೊಂಡಾಗ ಸರಕಾರದ ಬಳಿ ಹಣ ಇರಲಿಲ್ಲ. ಆದರೆ, ಇವತ್ತು 50 ಸಾವಿರ ಕೋಟಿ ರೂ.ಗಳನ್ನು ಮೆಟ್ರೋಗಾಗಿ ಖರ್ಚು ಮಾಡಲಾಗಿದೆ ಎಂದರು.
ಕೃಷ್ಣಾ ಮೇಲ್ದಂಡೆ ಯೋಜನೆ ಅನುಷ್ಠಾನಕ್ಕೆ ರಾಜಕೀಯ ಇಚ್ಛಾಶಕ್ತಿಯು ಅಗತ್ಯ. ಆಂಧ್ರಪ್ರದೇಶದಲ್ಲಿ ನಾಗಾರ್ಜುನ ಅಣೆಕಟ್ಟು ನಿರ್ಮಾಣ ಮಾಡಲು ಎಲ್ಲಾ ಕೆಲಸಗಳನ್ನು ನಿಲ್ಲಿಸಲಾಗಿತ್ತು. ಅದೇ ರೀತಿಯ ತೀರ್ಮಾನವನ್ನು ಕೃಷ್ಣಾ ಮೇಲ್ದಂಡೆ ಯೋಜನೆಗೆ ಸಂಬಂಧಿಸಿದಂತೆ ಸರಕಾರ ಕೈಗೊಳ್ಳಲಿ ಎಂದು ಅವರು ಆಗ್ರಹಿಸಿದರು.
ಬೆಂಗಳೂರು ಮೆಟ್ರೋ ರೈಲು ಯೋಜನೆಗಾಗಿ ಯಾವ ರೀತಿ ಮೂಲಸೌಕರ್ಯ ಸೆಸ್ ಹಾಕಲಾಗಿತ್ತೊ, ಆ ರೀತಿಯ ತೀರ್ಮಾನವನ್ನು ಕೃಷ್ಣಾ ಮೇಲ್ದಂಡೆ ಯೋಜನೆ ವಿಚಾರದಲ್ಲೂ ಕೈಗೊಳ್ಳಲಿ. ಇಲ್ಲದಿದ್ದರೆ, ನಬಾರ್ಡ್ ಮೂಲಕ ಮೂಲಸೌಕರ್ಯ ಅಭಿವೃದ್ಧಿಗೆ ನೆರವು ಸಿಗುತ್ತದೆ. ರೈತರ ಸಾಲ ಮನ್ನಾ ವಿಚಾರಕ್ಕೆ ನೀಡಿದ ಆದ್ಯತೆಯನ್ನು ಕೃಷ್ಣಾ ಮೇಲ್ದಂಡೆ ಯೋಜನೆ ವಿಚಾರದಲ್ಲೂ ಕೈಗೊಳ್ಳಿ ಎಂದು ಬಸವರಾಜ ಬೊಮ್ಮಾಯಿ ಒತ್ತಾಯಿಸಿದರು.
ಕಾವೇರಿಯಲ್ಲಿ ನಮಗೆ 14 ಟಿಎಂಸಿ ನೀರು ಹೆಚ್ಚು ಸಿಕ್ಕಿದೆ. ಬೆಂಗಳೂರಿಗೆ 4 ಟಿಎಂಸಿ ಬಳಸಿಕೊಳ್ಳಬಹುದಾಗಿದೆ. ಇದಕ್ಕಾಗಿ ಯಾವ ಯೋಜನೆ ರೂಪಿಸಲಾಗಿದೆ. ಮೇಕೆದಾಟು ಯೋಜನೆ ಏನಾಗಿದೆ? ಮಾಧ್ಯಮಗಳಲ್ಲಿ ಜಾಹೀರಾತುಗಳನ್ನು ಮಾತ್ರ ನಾವು ನೋಡಿದ್ದೇವೆ. ಈ ಯೋಜನೆಯ ಡಿಪಿಆರ್ ಕಥೆ ಏನಾಗಿದೆ ಎಂದು ಅವರು ಪ್ರಶ್ನಿಸಿದರು.
ಜಲಸಂಪನ್ಮೂಲ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳಲ್ಲಿ 10 ಸಾವಿರ ಕೋಟಿ ರೂ.ಗಳು ಗುತ್ತಿಗೆದಾರರಿಗೆ ಪಾವತಿಸುವುದು ಬಾಕಿಯಿದೆ. ಫೆಬ್ರವರಿ ನಂತರ ಆಗಿರುವ ಕೆಲಸಗಳಿಗೆ ಹಣ ಬಿಡುಗಡೆ ಮಾಡದಂತೆ ಸರಕಾರದಿಂದ ಮೌಖಿಕ ಆದೇಶ ನೀಡಲಾಗಿದೆ ಎಂದು ತಿಳಿದು ಬಂದಿದೆ ಎಂದು ಬೊಮ್ಮಾಯಿ ಆರೋಪಿಸಿದರು.
ರಾಜ್ಯಾದ್ಯಂತ ಎಲ್ಲ ಅಭಿವೃದ್ಧಿ ಕಾರ್ಯಗಳು ಸ್ಥಗಿತಗೊಂಡಿವೆ. ನಂಜುಂಡಪ್ಪ ವರದಿ ಅನ್ವಯ ಪ್ರಾದೇಶಿಕ ಅಸಮತೋಲನ ನಿವಾರಣೆಗಾಗಿ 2007 ರಿಂದ 2018ರವರೆಗೆ 11 ವರ್ಷಗಳಲ್ಲಿ ಒದಗಿಸಿದ್ದು 28 ಸಾವಿರ ಕೋಟಿ ರೂ.ಗಳು. ಬಿಡುಗಡೆ ಮಾಡಿದ್ದು 20 ಸಾವಿರ ಕೋಟಿ ರೂ.ಗಳಾದರೆ, ಖರ್ಚು ಮಾಡಿದ್ದು ಕೇವಲ 18 ಸಾವಿರ ಕೋಟಿ ರೂ.ಮಾತ್ರ ಎಂದು ಅವರು ಆರೋಪಿಸಿದರು.
ಹಾವೇರಿ ಜಿಲ್ಲೆಗೆ ಮಂಜೂರಾಗಿರುವ ವೈದ್ಯಕೀಯ ಕಾಲೇಜಿಗೆ ನಯಾ ಪೈಸೆ ನೀಡಿಲ್ಲ. ಕೆಎಂಎಫ್ ಸಂಸ್ಕರಣಾ ಘಟಕವನ್ನು ನೀಡಿಲ್ಲ. ಆದರೆ, ಹಾಸನ ಜಿಲ್ಲೆಯಲ್ಲಿ ಈಗಾಗಲೆ ಒಂದು ಸಂಸ್ಕರಣಾ ಘಟಕವಿದ್ದರೂ ಇನ್ನೊಂದು ಘೋಷಿಸಲಾಗಿದೆ. ಪ್ರಾದೇಶಿಕ ಅಸಮತೋಲನ ಹೆಚ್ಚಿಸುವ ಈ ಬಜೆಟ್‌ನಿಂದಾಗಿ, ಉತ್ತರ ಕರ್ನಾಟಕಕ್ಕೆ ಪ್ರತ್ಯೇಕ ರಾಜ್ಯದ ಸ್ಥಾನಮಾನ ನೀಡುವ ಕೂಗು ಏಳುವಂತೆ ಮಾಡಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ಉತ್ತರ ಕರ್ನಾಟಕಕ್ಕೆ ಇದೇ ರೀತಿ ಅಸಮತೋಲನವಾಗುತ್ತಿದ್ದರೆ ತೆಲಂಗಾಣ ಮಾದರಿಯಲ್ಲಿ ಪ್ರತ್ಯೇಕ ರಾಜ್ಯ ಬೇಕೆಂಬ ಅಂತಿಮ ಬೇಡಿಕೆಯ ಮೊರೆ ಹೋಗುತ್ತಾರೆ. ಇಂತಹ ಬೇಡಿಕೆ ಪ್ರಬಲಗೊಳ್ಳದಂತೆ ಎಚ್ಚರಿಕೆ ವಹಿಸಿ ಎಂದು ಬೊಮ್ಮಾಯಿ ಮನವಿ ಮಾಡಿದರು.
ಶಾದಿಭಾಗ್ಯ, ಭಾಗ್ಯಲಕ್ಷ್ಮಿ ಯೋಜನೆಯಡಿಯಲ್ಲಿ ಅರ್ಹರಿಗೆ ಸೌಲಭ್ಯ ಸಿಗುತ್ತಿಲ್ಲ. ಶಾದಿಭಾಗ್ಯ ಯೋಜನೆ ಹೇಗಾಗಿದೆ ಎಂದರೆ ದೇತು(ಕೊಡುತ್ತೇನೆ), ದಿಲಾತು(ಕೊಡಿಸುತ್ತೇನೆ), ದೇನೆವಾಲೋಂಕು ದಿಕಾತು(ಕೊಡುವವರನ್ನು ತೋರಿಸುತ್ತೇನೆ) ಅನ್ನೋ ರೀತಿ ಆಗಿದೆ. ಸರಕಾರ ಈ ಬಗ್ಗೆ ಹೆಚ್ಚಿನ ಗಮನ ಹರಿಸುವುದು ಒಳ್ಳೆಯದು.
-ಬಸವರಾಜ ಬೊಮ್ಮಾಯಿ, ಮಾಜಿ ಸಚಿವ







