ಎಲ್ಲ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ವಿಚಾರ: ಸರಕಾರದ ಕ್ರಮ ಖಂಡಿಸಿ ಪ್ರತಿಭಟನೆ
ಬೆಂಗಳೂರು, ಜು.11: ಎಲ್ಲ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ನೀಡಲಾಗುತ್ತದೆ ಎಂದು ಸರಕಾರ ನೀಡಿದ್ದ ಆಶ್ವಾಸನೆಯನ್ನು ಈಡೇರಿಸದಿದ್ದನ್ನು ಖಂಡಿಸಿ ಎಐಡಿಎಸ್‌ಓ ಹಾಗೂ ಎಐಡಿವೈಓ ಸಂಘಟನೆ ವತಿಯಿಂದ ನೂರಾರು ವಿದ್ಯಾರ್ಥಿಗಳು ನಗರದಲ್ಲಿಂದು ಪ್ರತಿಭಟನಾ ಮೆರವಣಿಗೆ ನಡೆಸಿದರು.
ನಗರದ ಪುರಭವನದಿಂದ ವಿವಿಧ ಕಾಲೇಜುಗಳಿಂದ ಆಗಮಿಸಿದ್ದ ನೂರಾರು ವಿದ್ಯಾರ್ಥಿಗಳು ಮೈಸೂರು ಬ್ಯಾಂಕ್ ವೃತ್ತದವರೆಗೂ ಬೃಹತ್ ರ್ಯಾಲಿ ನಡೆಸಿ ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಎಐಡಿಎಸ್‌ಓ ಜಿಲ್ಲಾ ಕಾರ್ಯದರ್ಶಿ ಅಜಯ್ ಕಾಮತ್, ಸತತವಾಗಿ ವಿದ್ಯಾರ್ಥಿಗಳ ಹೋರಾಟದಿಂದಾಗಿ ಹಿಂದಿನ ರಾಜ್ಯ ಸರಕಾರ ಎಲ್ಲ ವಿದ್ಯಾರ್ಥಿಗಳಿಗೂ ಉಚಿತ ಬಸ್‌ಪಾಸ್ ನೀಡಲಾಗುತ್ತದೆ ಎಂದು ಘೋಷಣೆ ಮಾಡಲಾಗಿತ್ತು. ಅಲ್ಲದೆ, ನೂತನ ಸಮ್ಮಿಶ್ರ ಸರಕಾರದಲ್ಲಿಯೂ ಭರವಸೆ ನೀಡಿದ್ದರು ಎಂದು ಹೇಳಿದರು.
ಪ್ರಸ್ತುತ ಸಾರಿಗೆ ಸಚಿವರು ತಮ್ಮ ಇಲಾಖೆಯ ಮೂಲಕ ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತ ಬಸ್‌ಪಾಸ್ ನೀಡುವುದಾಗಿ ಭರವಸೆ ನೀಡಿದ್ದರು. ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ತಮ್ಮ ಸಮನ್ವಯ ಸಮಿತಿ ಸಭೆಯ ನಂತರ ಹಿಂದಿನ ಸರಕಾರ ಘೋಷಿಸಿದಂತೆಯೇ ಈ ಬಾರಿ ಕೂಡ ಉಚಿತ ಬಸ್‌ಪಾಸ್ ಯೋಜನೆಯನ್ನು ಜಾರಿಗೆ ತರುವುದಾಗಿ ಹೇಳಿದ್ದರು. ಆದರೆ, ಇತ್ತೀಚಿಗೆ ಮಂಡಿಸಿದ ಬಜೆಟ್‌ನಲ್ಲಿ ಈ ಸಂಬಂಧ ಯಾವುದೇ ಪ್ರಸ್ತಾಪ ಮಾಡಿಲ್ಲ ಹಾಗೂ ಸಚಿವರು ಈ ಕುರಿತು ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಪ್ರಸ್ತುತವಿರುವ ಸರಕಾರಿ ಬಸ್‌ಗಳಲ್ಲಿ ವಿದ್ಯಾರ್ಥಿಗಳು ಅತ್ಯಂತ ಅಪಾಯಕಾರಿ ರೀತಿಯಲ್ಲಿ ಪ್ರಯಾಣ ಮಾಡುತ್ತಿದ್ದಾರೆ. ಹೀಗಿದ್ದರೂ, ಉಚಿತ ಬಸ್‌ಪಾಸ್ ನೀಡುವುದರಿಂದ ಇಲಾಖೆಗೆ ನಷ್ಟವಾಗುತ್ತದೆ ಎಂದು ಹೇಳುವುದು ಎಷ್ಟು ಸರಿ. ಸಾರಿಗೆ ಇಲಾಖೆಯಲ್ಲಿ ಅಪಾರ ಪ್ರಮಾಣದಲ್ಲಿ ಭ್ರಷ್ಟಾಚಾರ ಹಾಗೂ ದುಂದುವೆಚ್ಚ ನಡೆಯುತ್ತಿದೆ. ಅದಕ್ಕೆ ಕಡಿವಾಣ ಹಾಕುವ ಮೂಲಕ ವಿದ್ಯಾರ್ಥಿಗಳಿಗೆ ಪಾಸ್ ನೀಡಲು ಸಾಧ್ಯವಿಲ್ಲವೇ ಎಂದು ಹೇಳಿದರು.
ಎಲ್ಲ ವಿದ್ಯಾರ್ಥಿಗಳಿಗೂ ಉಚಿತ ಬಸ್‌ಪಾಸ್ ಸಿಗುವವರೆಗೂ ಹೋರಾಟ ನಿಲ್ಲುವುದಿಲ್ಲ, ಮತ್ತಷ್ಟು ತೀವ್ರವಾಗುತ್ತದೆ. ನೂತನ ಸರಕಾರ ಉಚಿತ ಬಸ್‌ಪಾಸ್ ಯೋಜನೆ ಜಾರಿಗೆ ತರುವ ಭರವಸೆ ನೀಡಿದ್ದರಿಂದ ನಾವು ಪ್ರತಿಭಟನೆಯನ್ನು ಹಿಂಪಡೆದಿದ್ದೆವು. ಆದರೆ, ಈಗ ಸರಕಾರ ಕೊಟ್ಟ ಮಾತಿಗೆ ತಪ್ಪಿದೆ. ಹೀಗಾಗಿ, ನಾವು, ಹೋರಾಟವನ್ನು ಮುಂದುವರೆಸುತ್ತೇವೆ ಎಂದು ಅವರು ತಿಳಿಸಿದರು.







