ಪ್ರತಿಯೊಬ್ಬ ಅತ್ಯಾಚಾರ ಸಂತ್ರಸ್ತೆಯಲ್ಲೂ ಸೋದರಿ, ಪುತ್ರಿಯನ್ನು ಕಾಣುತ್ತೇನೆಂದ ಶಾ ಫೈಝಲ್
ರೇಪಿಸ್ತಾನ್ ಟ್ವೀಟ್ ವಿವಾದ

ಹೊಸದಿಲ್ಲಿ, ಜು.12: ದಕ್ಷಿಣ ಏಷ್ಯಾದಲ್ಲಿನ 'ರೇಪ್ ಸಂಸ್ಕೃತಿ'ಯ ಬಗ್ಗೆ `ರೇಪಿಸ್ತಾನ್' ಎಂಬ ಪದ ಉಪಯೋಗಿಸಿ ಟ್ವೀಟ್ ಮಾಡಿ ಸರಕಾರದ ಆಕ್ರೋಶಕ್ಕೆ ಗುರಿಯಾಗಿದ್ದ 2010ರ ಐಎಎಸ್ ಟಾಪರ್ ಜಮ್ಮು ಕಾಶ್ಮೀರದ ಶಾ ಫೈಝಲ್ ತಾನು ಉದ್ಯೋಗ ಕಳೆದುಕೊಳ್ಳಲೂ ಭಯ ಪಡುವುದಿಲ್ಲ. ತನಗೆ ಯಾವುದು ಇಷ್ಟವೋ ಅದರ ಪರವಾಗಿಯೇ ನಿಲ್ಲುವುದಾಗಿ ಸ್ಪಷ್ಟ ಪಡಿಸಿದ್ದಾರೆ.
ರೇಪ್ ಸಂತ್ರಸ್ತರಿಗೆ ಏನಾದರೂ ಸಹಾಯ ಮಾಡಬೇಕೆಂಬ ಮನಸ್ಸು ತನಗಿದೆ ಎಂದು ಹೇಳಿರುವ ಹಾರ್ವರ್ಡ್ ವಿಶ್ವ ವಿದ್ಯಾಲಯದ ಫೆಲೋಶಿಪ್ ಮಾಡುತ್ತಿರುವ ಫೈಝಲ್, ಪ್ರತಿಯೊಂದು ಬಾರಿ ಅತ್ಯಾಚಾರ ಘಟನೆಯ ಬಗ್ಗೆ ವರದಿಯಾದಾಗಲೂ ತಾನು ಸಂತ್ರಸ್ತೆಯಲ್ಲಿ ತನ್ನ ಸೋದರಿ ಅಥವಾ ಪುತ್ರಿಯನ್ನು ಕಾಣುತ್ತೇನೆ ಎಂದು ಹೇಳಿದ್ದಾರೆ.
'ರೇಪಿಸ್ತಾನ್' ಟ್ವೀಟ್ ನಂತರ ತನಗೆ ಬಂದಿರುವ ಶೋಕಾಸ್ ನೋಟಿಸ್ ಪ್ರತಿಯೊಂದನ್ನು ಪೋಸ್ಟ್ ಮಾಡಿರುವ ಫೈಝಲ್ ಅದನ್ನು `ಪ್ರೇಮ ಪತ್ರ' ಎಂದು ಬಣ್ಣಿಸಿದ್ದರು. ರೇಪ್ ಸಂಸ್ಕೃತಿಯ ಬಗ್ಗೆ ಮಾಡಿದ ಟ್ವೀಟ್ ಬಗ್ಗೆ ವಿವರಣೆ ನೀಡುವಂತೆ ಆವರಿಗೆ ಆ ಪತ್ರದಲ್ಲಿ ಹೇಳಲಾಗಿತ್ತು. ಪತ್ರದಲ್ಲಿ ಸರಕಾರದ ಆಯುಕ್ತ/ಕಾರ್ಯದರ್ಶಿ ಅವರ ವಿರುದ್ಧ ಇಲಾಖಾ ಕ್ರಮ ಕೈಗೊಳ್ಳಲು ಹೇಳಿದ್ದಾರೆ. ಅವರ ಟ್ವೀಟ್ ನಲ್ಲಿನ ಹಲವು ವಿಚಾರಗಳು ಆಲ್ ಇಂಡಿಯಾ ಸರ್ವಿಸಸ್ ನಿಯಮಗಳ ಉಲ್ಲಂಘನೆಯಾಗಿದೆ ಎಂದೂ ಪತ್ರದಲ್ಲಿ ತಿಳಿಸಲಾಗಿದೆ.
ಕೆಲಸ ಕಳೆದುಕೊಂಡರೂ ಭಯವಿಲ್ಲ, ಸಾಕಷ್ಟು ಅವಕಾಶಗಳಿರುವ ಈ ಜಗತ್ತಿನಲ್ಲಿ ತಾವು ನಿರುದ್ಯೋಗಿಯಾಗಿ ಉಳಿಯುವ ಭಯವಿಲ್ಲ ಎಂಬ ಅಭಿಪ್ರಾಯವನ್ನೂ ಹೊಂದಿರುವ ಫೈಝಲ್ ತಾನು ವ್ಯವಸ್ಥೆಯನ್ನು ಪ್ರಶ್ನಿಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.







