ಕಂಬಳ ಕ್ರೀಡೆಗೆ 5 ಕೋಟಿ ರೂ. ಅನುದಾನ ನೀಡಿ: ಐವನ್ ಡಿಸೋಜ

ಬೆಂಗಳೂರು, ಜು.12: ಕರಾವಳಿ ಪ್ರದೇಶದ ಜನಪದ ಕ್ರೀಡೆಯಾಗಿರುವ ಕಂಬಳಕ್ಕೆ ರಾಜ್ಯ ಸರಕಾರ 5ಕೋಟಿ ರೂ.ಅನುದಾನ ನೀಡಬೇಕು ಎಂದು ಕಾಂಗ್ರೆಸ್ ಸದಸ್ಯ ಐವನ್ ಡಿಸೋಜ ಒತ್ತಾಯಿಸಿದರು.
ಗುರುವಾರ ವಿಧಾನಪರಿಷತ್‌ನಲ್ಲಿ ಬಜೆಟ್ ಕುರಿತು ಮಾತನಾಡುತ್ತಾ, ಮಂಗಳೂರು, ಉಡುಪಿ ಹಾಗೂ ಕರಾವಳಿ ಪ್ರದೇಶದಲ್ಲಿ ಕಂಬಳ ಕ್ರೀಡೆಯು ಅಲ್ಲಿನ ಸಂಸ್ಕೃತಿಯ ಪ್ರತೀಕವಾಗಿದೆ. ಪ್ರತಿ ವರ್ಷ 14 ಕಂಬಳವನ್ನು ಆಯೋಜಿಸಲಾಗುತ್ತಿದೆ. ಪ್ರತಿ ಕಂಬಳಕ್ಕೂ 4ರಿಂದ 5ಲಕ್ಷ ಜನ ಭಾಗವಹಿಸಿ ಕ್ರೀಡೆಯನ್ನು ಆಸ್ವಾದಿಸುತ್ತಾರೆ. ಹೀಗಾಗಿ ಈ ಕ್ರೀಡೆಗೆ ರಾಜ್ಯ ಸರಕಾರ ಆರ್ಥಿಕ ನೆರವು ನೀಡಿದರೆ ಮತ್ತಷ್ಟು ಅಭಿವೃದ್ಧಿಗೊಳಿಸಲು ಸಾಧ್ಯವಾಗುತ್ತದೆ ಎಂದು ಆಶಿಸಿದರು.
ವೀರಪ್ಪ ಮೊಯ್ಲಿ ಮುಖ್ಯಮಂತ್ರಿಯಾಗಿದ್ದಾಗ ಕಂಬಳ ಕ್ರೀಡೆಗೆ 75ಲಕ್ಷ ರೂ.ಅನುದಾನ ಬಿಡುಗಡೆ ಮಾಡಿದ್ದರು. ಬಿ.ಎಸ್.ಯಡಿಯೂರಪ್ಪ ಅವಧಿಯಲ್ಲಿ ಅನುದಾನವನ್ನು 1ಕೋಟಿ ರೂ.ಗೆ ಹೆಚ್ಚಿಸಲಾಯಿತು. ಸದಾನಂದ ಗೌಡರು 1ಕೋಟಿ ರೂ. ನೀಡಿದ್ದರು. ಹೀಗಾಗಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅನುದಾನದ ಮೊತ್ತವನ್ನು 5 ಕೋಟಿ ರೂ.ಗೆ ಹೆಚ್ಚಿಸಬೇಕೆಂದು ಅವರು ಒತ್ತಾಯಿಸಿದರು.
ಕರಾವಳಿಯಲ್ಲಿ ಭದ್ರತೆ ಹೆಚ್ಚಿಸಿ: ಕರಾವಳಿ ಜಿಲ್ಲೆ ಶಿಕ್ಷಣ ಕ್ಷೇತ್ರದಲ್ಲಿ ಸದಾ ಮೊದಲನೆ ಸ್ಥಾನದಲ್ಲಿರುತ್ತದೆ. ಆದರೆ, ಕೋಮು ಗಲಭೆಯ ಕಾರಣದಿಂದಾಗಿ ಭಯಗ್ರಸ್ಥವಾದ ವಾತಾವರಣ ನಿರ್ಮಾಣವಾಗಿದೆ. ಹೀಗಾಗಿ ಕೋಮು ಸೌಹಾರ್ದತೆಯನ್ನು ಹಾಳು ಮಾಡುವಂತಹ ಶಕ್ತಿಗಳನ್ನು ಮಟ್ಟ ಹಾಕಲು ಪೊಲೀಸ್ ಸಿಬ್ಬಂದಿಗಳ ಸಂಖ್ಯೆಯನ್ನು ಹೆಚ್ಚಿಸಬೇಕು ಎಂದು ಒತ್ತಾಯಿಸಿದರು.
ಇಷ್ಟು ಜನಸಂಖ್ಯೆಗೆ ಇಂತಿಷ್ಟು ಪೊಲೀಸರು ಇರಬೇಕೆಂದು ಕಾನೂನಿನಲ್ಲಿ ನಿಯಮವಿದೆ. ಈ ಹಿನ್ನೆಲೆಯಲ್ಲಿ ಗಮನಿಸುವುದಾದರೆ 15 ಲಕ್ಷ ಜನಸಂಖ್ಯೆಯನ್ನು ಹೊಂದಿರುವ ದಕ್ಷಿಣ ಕನ್ನಡದಲ್ಲಿ 2,500 ಜನತೆಗೆ ಒಬ್ಬ ಪೊಲೀಸ್ ಸಿಬ್ಬಂದಿ ಇದ್ದಾರೆ. ಇಷ್ಟೊಂದು ಕಡಿಮೆ ಮಟ್ಟದ ಸಿಬ್ಬಂದಿಗಳನ್ನು ಇಟ್ಟುಕೊಂಡು ಸೂಕ್ಷ್ಮಪ್ರದೇಶವಾಗಿರುವ ದಕ್ಷಿಣ ಕನ್ನಡದಲ್ಲಿ ಶಾಂತಿ ಸುವ್ಯವಸ್ಥೆ ಸ್ಥಾಪಿಸಲು ಸಾಧ್ಯವಿಲ್ಲ. ಈ ಕೂಡಲೆ ರಾಜ್ಯ ಸರಕಾರ ವಿಶೇಷ ಆದ್ಯತೆ ಮೇರೆಗೆ ಕರಾವಳಿ ಪ್ರದೇಶದಲ್ಲಿ ಪೊಲೀಸ್ ಭದ್ರತೆಯನ್ನು ಹೆಚ್ಚಿಸಬೇಕೆಂದು ಮನವಿ ಮಾಡಿದರು.







