ವಿದ್ಯಾರ್ಥಿಗಳಿಗೆ ಹಿತ್ತಲಿನ ಬಸಳೆ ಸೊಪ್ಪಿನ ಮಹತ್ವ ಹೇಳುತ್ತಿಲ್ಲ: ಅನಂತ್ ಕುಮಾರ್ ಹೆಗಡೆ

ಬೆಂಗಳೂರು, ಜು.12: ಇಂದಿನ ವಿದ್ಯಾರ್ಥಿಗಳಿಗೆ ಸಾಮಾನ್ಯ ಜ್ಞಾನದ ಹೆಸರಿನಲ್ಲಿ ಪ್ರಪಂಚದ ಯಾವುದೋ ದೇಶದಲ್ಲಿ ಬೆಳೆಯುವ ಸಸ್ಯದ ಬಗ್ಗೆ ಪರಿಚಯ ಮಾಡಿಸುತ್ತೇವೆ. ಆದರೆ ಮನೆಯ ಹಿತ್ತಲಲ್ಲಿ ಬೆಳೆದಿರುವ ಬಸಳೆ ಸೊಪ್ಪಿನ ಮಹತ್ವ ಹೇಳುತ್ತಿಲ್ಲ ಎಂದು ಕೇಂದ್ರ ಕೌಶಲ್ಯಾಭಿವೃದ್ಧಿ ಸಚಿವ ಅನಂತ ಕುಮಾರ್ ಹೆಗಡೆ ತಿಳಿಸಿದ್ದಾರೆ.
ಗುರುವಾರ ಮಲ್ಲೇಶ್ವರಂ ಮಹಿಳಾ ಸಂಘ ನಗರದ ಎಂಎಲ್‌ಎ ಕಾಲೇಜಿನಲ್ಲಿ ಆಯೋಜಿಸಿದ್ದ, 2018-19ನೆ ಸಾಲಿನ ಸಾಂಸ್ಕೃತಿಕ, ಸಾಹಿತ್ಯಕ ಹಾಗೂ ಕ್ರೀಡಾ ಚಟುವಟಿಕೆಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು. ಮಕ್ಕಳು ಬದುಕಿಗೆ ಅವಶ್ಯಕವಾಗಿರುವ ಅಂಶವನ್ನು ಮಾತ್ರ ನೆನಪಿಟ್ಟುಕೊಳ್ಳಬೇಕೆಂದು ಹೇಳಿ ಅವರ ಜೀವನವನ್ನು ಒಂದು ಹಾರ್ಡ್ ಡಿಸ್ಕ್‌ನಂತೆ ಮಾಡಲಾಗುತ್ತಿದೆ. ಆದರೆ, ಮಕ್ಕಳಿಗೆ ವಾಸ್ತವ ಬದುಕಿನ ಬಗ್ಗೆ ತಿಳಿಸುವ ಪ್ರಯತ್ನ ಮಾಡುತ್ತಿಲ್ಲ ಎಂದು ನುಡಿದರು.
ಕೌಶಲ್ಯ ಎಂದರೆ ಕೇವಲ ಡಾಕ್ಟರ್, ಇಂಜಿನಿಯರ್ ಇನ್ಯಾವುದೋ ಕೋರ್ಸ್‌ಗೆ ಉದ್ಯೋಗಕ್ಕಾಗಿ ಹಾಕಿಕೊಡುವ ಮಾರ್ಗವಲ್ಲ, ನಾವು ಮಾಡುವ ಕೆಲಸವನ್ನು ಪ್ರೀತಿಯಿಂದ ಅಂತರಂಗ ಮೆಚ್ಚುವಂತೆ ಮಾಡುವ ಕೆಲಸವೇ ಕೌಶಲ್ಯವಾಗಿದೆ. ಅದು ಹೊರಗಿನಿಂದ ತುಂಬುವುದಕ್ಕೆ ಸಾಧ್ಯವಿಲ್ಲ ಅಂತರಾಳದಿಂದ ಹುಟ್ಟಬೇಕು ಎಂದರು.
ಕೇಂದ್ರ ಸರಕಾರ ನವ ಭಾರತದ ನಿರ್ಮಾಣದ ಬಗ್ಗೆ ಚಿಂತನೆ ಮಾಡುತ್ತಿದೆ. ಭಾರತ ಇದೀಗ ಔದ್ಯೋಗಿಕ ಆರ್ಥಿಕ ವ್ಯವಸ್ಥೆಯಿಂದ ಜ್ಞಾನಾತ್ಮಕ ಆರ್ಥಿಕತೆ ಕಡೆಗೆ ಸಾಗುತ್ತಿದೆ. ಮುಂದಿನ ಹಂತ ಸೃಜನಶೀಲತೆ ಮತ್ತು ನೈಪುಣ್ಯತೆಯ ಆರ್ಥಿಕತೆಯಾಗಿದ್ದು, ಆ ದೃಷ್ಟಿಯಿಂದ ಸರಕಾರ ಕೌಶಲ್ಯಾಭಿವೃದ್ಧಿ ಕಾರ್ಯಕ್ರಮಗಳನ್ನು ರೂಪಿಸುತ್ತಿದೆ ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷೆ ರುಕ್ಮಿಣಿ, ಪ್ರಾಂಶುಪಾಲ ಗಣಪತಿ ಹೆಗಡೆ ಉಪಸ್ಥಿತರಿದ್ದರು.







