ಉಳ್ಳಾಲ ನಗರಸಭೆಯಲ್ಲಿ ಪೌರ ಕಾರ್ಮಿಕರಿಗೆ ಗೌರವಾರ್ಪಣೆ

ಉಳ್ಳಾಲ,ಜು.12: ಉಳ್ಳಾಲ ನಗರಸಭೆ ಇತರ ಸ್ಥಳೀಯ ಸಂಸ್ಥೆಗಳಿಗಿಂತಲೂ ಅಭಿವೃದ್ಧಿ ಹೊಂದಿದೆ. ಆದರೆ ಈ ವಿಚಾರದಲ್ಲಿ ಬೀಗುವಂತಿಲ್ಲ. ಇನ್ನೂ ಸಾಧಿಸಬೇಕಿರುವುದು ಸಾಕಷ್ಟಿದೆ. ನಾವು ಕಚೇರಿಯಲ್ಲಿ ಕುಳಿತು ನೀಡಿದ ಸೂಚನೆಗಳನ್ನು ಪೌರ ಕಾರ್ಮಿಕರು ಪ್ರತೀ ವಾರ್ಡ್ ಗಳಲ್ಲೂ ಪಾಲಿಸಿದ್ದರಿಂದ ನಮಗೆ ಪ್ರಶಸ್ತಿ ಬಂದಿದೆ ಎಂದು ಉಳ್ಳಾಲ ನಗರಸಭಾ ಪೌರಾಯುಕ್ತೆ ವಾಣಿ ವಿ.ಆಳ್ವ ಅಭಿಪ್ರಾಯಪಟ್ಟರು.
ಸ್ವಚ್ಛತಾ ಸರ್ವೇಕ್ಷಣೆಯಲ್ಲಿ ನಗರಸಭೆಗೆ ಪ್ರಶಸ್ತಿ ಬಂದ ಹಿನ್ನೆಲೆಯಲ್ಲಿ ಗುರುವಾರ ಅಯೋಜಿಸಲಾಗಿದ್ದ ಪೌರ ಕಾರ್ಮಿಕರಿಗೆ ಗೌರವಾರ್ಪಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ನಗರಸಭೆಗೆ ರಾಜ್ಯಮಟ್ಟದಲ್ಲಿ ನಾಲ್ಕನೇ ಹಾಗೂ ಜಿಲ್ಲಾ ಮಟ್ಟದಲ್ಲಿ ಪ್ರಶಸ್ತಿ ಬರುವಲ್ಲಿ ಪೌರ ಕಾರ್ಮಿಕರು ಸ್ವಚ್ಚತಾ ರಾಯಭಾರಿಗಳಾಗಿ ಕಾರ್ಯನಿರ್ವಹಿಸಿದ್ದಾರೆ ಎಂದು ಅವರು ಹೇಳಿದರು.
ನಗರಸಭಾ ಸದಸ್ಯ ಫಾರೂಕ್ ಉಳ್ಳಾಲ್ ಮಾತನಾಡಿ, ಊರು ಶುಚಿಯಾಗಿಡುವಲ್ಲಿ ದೊರಕಿರುವ ನಾಲ್ಕನೇ ಸ್ಥಾನ ತೃಪ್ತಿಕರವಲ್ಲ, ಮೊದಲನೇ ಸ್ಥಾನಕ್ಕೆ ಬರಬೇಕಿತ್ತು. ಹಿಂದಿನ ಉಳ್ಳಾಲಕ್ಕೂ ಇಂದಿಗೂ ಅಜಗಜಾಂತರ ವ್ಯತ್ಯಾಸ ಇದೆ. ಆದರೆ ದೂರುತ್ತಾ ಇರುವವರಿಗೆ ಏನೂ ಮಾಡಲಾಗದು. ಸ್ವಚ್ಚತಾ ವಿಷಯದಲ್ಲಿ ಪೊಲೀಸರ ಸಹಕಾರ ಇಲ್ಲದಿದ್ದರೂ ಪೌರಾಯುಕ್ತರ ಶ್ರಮ ಅಭಿನಂದನೀಯ ಎಂದರು.
ಕಾರ್ಯಕ್ರಮದಲ್ಲಿ ಪೌರಕಾರ್ಮಿಕರಿಗೆ ಸಮವಸ್ತ್ರ ಹಾಗೂ ರೈನ್ ಕೋಟ್ ವಿತರಿಸಲಾಯಿತು.
ನಗರಸಭಾಧ್ಯಕ್ಷ ಹುಸೈನ್ ಕುಂಞಿಮೋನು ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಚಿತ್ರಕಲಾ, ಸದಸ್ಯರಾದ ಮುಸ್ತಫಾ ಅಬ್ದುಲ್ಲಾ, ದಿನೇಶ್ ರೈ, ಮುಹಮ್ಮದ್ ಮುಕ್ಕಚ್ಚೇರಿ, ಸುಕುಮಾರ್, ಮಹಾಲಕ್ಷ್ಮಿ, ಸೂರ್ಯಕಲಾ, ಶಶಿಕಲಾ ಶೆಟ್ಟಿ, ಇಸ್ಮಾಯಿಲ್, ಬಾಝಿಲ್ ಡಿಸೋಜ, ಸುಂದರ ಉಳಿಯ ಮೊದಲಾದವರು ಉಪಸ್ಥಿತರಿದ್ದರು.
ಕಿರಿಯ ಆರೋಗ್ಯಾಧಿಕಾರಿ ರಾಜೇಶ್ ವಂದಿಸಿದರು.
'ನಗರಸಭೆಗೆ ಸ್ವಚ್ಛತೆಯಲ್ಲಿ ನಾಲ್ಕನೇ ಸ್ಥಾನ ಬಂದಿರುವುದು ನಿಜಕ್ಕೂ ಹೆಮ್ಮೆಯ ವಿಚಾರ. ಈ ಪ್ರಶಸ್ತಿ ಬರಬೇಕಾದರೆ ಅಧಿಕಾರಿಗಳು, ಜನಪ್ರತಿನಿದಿಗಳು, ಪೌರಕಾರ್ಮಿಕರು, ಸಂಘ-ಸಂಸ್ಥೆಗಳ ಶ್ರಮ ಇದೆ'
ಹುಸೈನ್ ಕುಂಞಿಮೋನು, ಅಧ್ಯಕ್ಷ, ಉಳ್ಳಾಲ ನಗರಸಭೆ







