ಹೊರ ರಾಜ್ಯದ ಹಾಲು ನಿರ್ಬಂಧಕ್ಕೆ ಕ್ರಮ: ಸಚಿವ ಬಂಡೆಪ್ಪ ಕಾಶಂಪುರ್

ಬೆಂಗಳೂರು, ಜು.12: ಹೊರ ರಾಜ್ಯದಿಂದ ವಿವಿಧ ಹೆಸರಿನಡಿ ರಾಜ್ಯಕ್ಕೆ ಆಮದಾಗುವ ಹಾಲನ್ನು ನಿರ್ಭಂಧಿಸುವ ಕುರಿತು ಚಿಂತನೆ ನಡೆಸಲಾಗುತ್ತಿದೆ ಎಂದು ಸಹಕಾರ ಸಚಿವ ಬಂಡೆಪ್ಪ ಕಾಶಂಪುರ್ ತಿಳಿಸಿದರು.
ಗುರುವಾರ ವಿಧಾನ ಪರಿಷತ್‌ನಲ್ಲಿ ಕಾಂಗ್ರೆಸ್ ಸದಸ್ಯ ಎನ್.ರವಿ ಬಜೆಟ್ ಕುರಿತು ಮಾತನಾಡುವ ಸಂದರ್ಭದಲ್ಲಿ ಮಧ್ಯೆ ಪ್ರವೇಶಿಸಿ ಪ್ರತಿಕ್ರಿಯಿಸಿದ ಅವರು, ಪ್ರತಿದಿನ ಬೆಂಗಳೂರಿಗೆ 10 ಲಕ್ಷ ಲೀಟರ್ ಹೊರ ರಾಜ್ಯದ ಹಾಲು ಆಮದಾಗುತ್ತಿದೆ. ಈ ಹಾಲಿನ ಗುಣಮಟ್ಟ ಕೆಎಂಎಫ್‌ಗಿಂತ ಕಡಿಮೆ ದರ್ಜೆಯದಾಗಿದೆ. ಇನ್ನು ಉತ್ತರ ಕರ್ನಾಟಕ ಭಾಗಕ್ಕೆ ಮಹಾರಾಷ್ಟ್ರದಿಂದ ಹಾಲು ಆಮದಾಗುತ್ತಿದ್ದು, ಇದನ್ನು ತಡೆಯುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ರಾಜ್ಯದಲ್ಲಿರುವ 14 ಹಾಲು ಒಕ್ಕೂಟದ ಅಧ್ಯಕ್ಷರುಗಳು ಬುಧವಾರ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯನ್ನು ಭೇಟಿ ಮಾಡಿ, ಹಾಲಿನ ಸಬ್ಸಿಡಿ ದರ ಹೆಚ್ಚಳ ಸೇರಿದಂತೆ ಹಲವು ಬೇಡಿಕೆಗಳ ಕುರಿತು ಮನವಿ ಸಲ್ಲಿಸಿದ್ದಾರೆ. ಇದಕ್ಕೆ ಮುಖ್ಯಮಂತ್ರಿಗಳಿಂದ ಸಕಾರಾತ್ಮಕ ಪ್ರತಿಕ್ರಿಯೆ ಬಂದಿದೆ ಎಂದು ಅವರು ಹೇಳಿದರು.
ಈ ವೇಳೆ ಸದಸ್ಯ ರವಿ ಮಾತನಾಡಿ, ರಾಜ್ಯದಲ್ಲಿ 14 ಹಾಲಿನ ಒಕ್ಕೂಟಗಳಿಂದ ದಿನನಿತ್ಯ 85 ಲಕ್ಷ ಕೆಜಿ ಹಾಲು ಸಂಗ್ರಹವಾಗುತ್ತಿದೆ. ಇದರಲ್ಲಿ ಬಮೂಲ್ ಒಂದರಲ್ಲಿಯೆ 17ಲಕ್ಷ ಕೆಜಿ ಹಾಲು ಸಂಗ್ರಹವಾಗುತ್ತಿದೆ. ಆದರೆ, ಇದನ್ನು ಸರಿಯಾದ ರೀತಿಯಲ್ಲಿ ಸದ್ಬಳಿಕೆ ಮಾಡಿಕೊಳ್ಳುವಂತಹ ವ್ಯವಸ್ಥೆ ನಮ್ಮಲ್ಲಿಲ್ಲವೆಂದು ವಿಷಾದಿಸಿದರು.
ರಾಜ್ಯದಲ್ಲಿ ಪ್ರತಿದಿನ ಉತ್ಪಾದನೆಯಾಗುವ ಹಾಲನ್ನು ಸಂಪೂರ್ಣವಾಗಿ ಸದ್ಬಳಕೆ ಮಾಡಿಕೊಳ್ಳುವ ವ್ಯವಸ್ಥೆಗೆ ರಾಜ್ಯ ಸರಕಾರ ಮುಂದಾಗಬೇಕು. ಈ ನಿಟ್ಟಿನಲ್ಲಿ ಪ್ರತಿ ಜಿಲ್ಲೆಯಲ್ಲೂ ಬೃಹತ್ ಹಾಲಿನ ಡೈರಿಗಳನ್ನು ತೆರೆದು, ಹಾಲಿನ ಉಪ ಉತ್ಪನ್ನಗಳನ್ನು ತಯಾರಿಸುವಂತಹ ಯೋಜನೆ ರೂಪಿಸಬೇಕು. ಇದರ ಭಾಗವಾಗಿ ಹಾಸನದಲ್ಲಿ ಬೃಹತ್ ಹಾಲಿನ ಡೈರಿಯನ್ನು ತೆರೆಯಲು ಬಜೆಟ್‌ನಲ್ಲಿ ಘೋಷಿಸಿರುವುದು ಸ್ವಾಗತಾರ್ಹ ಕ್ರಮವೆಂದು ಅವರು ಅಭಿನಂದಿಸಿದರು.
ಬಸವರಾಜು ಸಮಿತಿ ಜಾರಿಯಾಗಲಿ: ಇಡೀ ದೇಶದಲ್ಲಿ ರೇಷ್ಮೆ ಉತ್ಪಾದನೆಯಲ್ಲಿ ಕರ್ನಾಟಕ ಮೊದಲ ಸ್ಥಾನದಲ್ಲಿದೆ. ಆದರೆ, ರೇಷ್ಮೆ ಬೆಳೆಗಾರರ ಬದುಕು ಮಾತ್ರ ಸುಧಾರಣೆಯಾಗಿಲ್ಲ. ಹೀಗಾಗಿ 2013ರಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ರೇಷ್ಮೆ ಬೆಳೆಗಾರರ ಕುರಿತು ಅಧ್ಯಯನಕ್ಕೆ ಬಸವರಾಜು ಸಮಿತಿ ರಚಿಸಿದ್ದರು. ಆ ವರದಿಯಲ್ಲಿ ರೇಷ್ಮೆ ಬೆಳೆಗಾರರ ಅಭ್ಯುದಯಕ್ಕೆ ಕೈಗೊಳ್ಳಬೇಕಾದ ಕನಿಷ್ಠ ಬೆಂಬಲ ಬೆಲೆ ನೀಡುವುದು ಸೇರಿದಂತೆ ಹಲವು ಉಪಯುಕ್ತ ಅಂಶಗಳನ್ನೊಳಗೊಂಡ ವಿಸ್ತೃತವಾದ ವರದಿಯನ್ನು ಸರಕಾರಕ್ಕೆ ನೀಡಲಾಗಿದೆ. ಈ ವರದಿಯನ್ನು ಜಾರಿ ಮಾಡುವ ಮೂಲಕ ರೇಷ್ಮೆ ಬೆಳೆಗಾರರ ನೆರವಿಗೆ ರಾಜ್ಯ ಸರಕಾರ ಧಾವಿಸಬೇಕೆಂದು ಅವರು ಒತ್ತಾಯಿಸಿದರು.







