ಲೈಂಗಿಕ ದೌರ್ಜನ್ಯದ ಆಘಾತ ಸಹಿಸಲಾರೆ, ದಯಾಮರಣ ನೀಡಿ: ರಾಷ್ಟ್ರಪತಿಗೆ ಪತ್ರ ಬರೆದ ಸಂತ್ರಸ್ತ

ರಾಷ್ಟ್ರಪತಿ ರಾಮನಾಥ್ ಕೋವಿಂದ್
ಹೈದರಾಬಾದ್, ಜು. 12: ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ಲೈಂಗಿಕ ದೌರ್ಜನ್ಯಕ್ಕೆ ಒಳಗಾದ 24 ವರ್ಷದ ವ್ಯಕ್ತಿಯೋರ್ವ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಗೆ ಪತ್ರಬರೆದು ದಯಾಮರಣ ನೀಡುವಂತೆ ಆಗ್ರಹಿಸಿದ್ದಾರೆ.
‘‘ಲೈಂಗಿಕ ದೌರ್ಜನ್ಯದ ಸಂತ್ರಸ್ತನಾಗಿ ಜೀವಿಸುವುದು ಸುಲಭವಲ್ಲ. ದುಸ್ವಪ್ನವಾಗಿ ಕಾಡುತ್ತಿರುವ ಆ ಕಹಿ ಘಟನೆಗಳ ವಿರುದ್ಧ ನಾನು ಈಗಲೂ ಹೋರಾಟ ನಡೆಸುತ್ತಿದ್ದೇನೆ. ಆ ಅಮಾನುಷ ಘಟನೆಯ ಸಂತ್ರಸ್ತನಾಗಿರುವ ನಾನು ಆ ನೋವಿನಿಂದ ಬಿಡುಗಡೆ ಹೊಂದಲು ದಯಾಮರಣಕ್ಕೆ ನಿಮ್ಮಿಂದ ಅನುಮತಿ ಕೋರುತ್ತಿದ್ದೇನೆ.’’ ಎಂದು ಅವರು ರಾಷ್ಟ್ರಪತಿ ಅವರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ. ಈ ವ್ಯಕ್ತಿ 8 ವರ್ಷಗಳ ಬಾಲಕನಿರುವಾಗ ಸೋದರ ಸಂಬಂಧಿ ಲೈಂಗಿಕ ದೌರ್ಜನ್ಯ ನಡೆಸಿದ್ದ. ಆತ ಪ್ರೌಢಶಾಲೆಯಲ್ಲಿ ಕಲಿಯುತ್ತಿರುವಾಗ ಅಧ್ಯಾಪಕರು ಲೈಂಗಿಕ ದೌರ್ಜನ್ಯ ನಡೆಸಿದ್ದರು ಎಂದು ಪತ್ರದಲ್ಲಿ ಹೇಳಲಾಗಿದೆ.
‘‘ನಾನು ಈ ವಿಚಾರವನ್ನು ನನ್ನ ಹೆತ್ತವರ ಗಮನಕ್ಕೆ ತಂದೆ. ಮಹಿಳೆಯರು ಹಾಗೂ ಬಾಲಕಿಯರ ಮೇಲೆ ಅತ್ಯಾಚಾರ ನಡೆಯುತ್ತಿರುವುದನ್ನು ಅವರು ಕೇಳಿದ್ದರು, ಆದರೆ, ಬಾಲಕರ ಮೇಲೆ ಅತ್ಯಾಚಾರ ನಡೆದಿರುವುದನ್ನು ಅವರು ಇದೇ ಮೊದಲ ಬಾರಿ ಕೇಳಿದ್ದರು. ಆದುದರಿಂದ ಅವರು ಆಘಾತಕ್ಕೆ ಒಳಗಾದರು. ಅವರು ಪೊಲೀಸ್ ದೂರು ನೀಡಿದ್ದರು. ಆದರೆ, ತನ್ನ ಮೇಲೆ ಅತ್ಯಾಚಾರ ನಡೆದಿದೆ ಎಂದು ಯಾರೊಬ್ಬರೂ ಒಪ್ಪಿಕೊಳ್ಳಲು ಸಿದ್ಧವಿರಲಿಲ್ಲ. ನಮ್ಮ ಕುಟುಂಬ ಸಾಂಪ್ರದಾಯಿಕ ಕುಟುಂಬ. ಆದುದರಿಂದ ಅವರು ಸಮಾಜಕ್ಕೆ ಹೆದರಿ ಬಹಿರಂಗವಾಗಿ ಹೇಳಲಿಲ್ಲ’’ ಎಂದು ಆ ವ್ಯಕ್ತಿ ಪತ್ರದಲ್ಲಿ ಹೇಳಿದ್ದಾರೆ.







