ವಿವಾಹದ ವೆಚ್ಚ ಬಹಿರಂಗ ಕಡ್ಡಾಯ: ಪರಿಶೀಲಿಸುವಂತೆ ಕೇಂದ್ರ ಸರಕಾರಕ್ಕೆ ಸುಪ್ರೀಂ ಕೋರ್ಟ್ ಸೂಚನೆ

ಹೊಸದಿಲ್ಲಿ, ಜು. 12: ವಿವಾಹ ವೆಚ್ಚವನ್ನು ಕುಟುಂಬಗಳು ಬಹಿರಂಗ ಪಡಿಸುವುದನ್ನು ಕಡ್ಡಾಯ ಮಾಡುವ ಬಗ್ಗೆ ಪರಿಶೀಲನೆ ನಡೆಸುವಂತೆ ಸುಪ್ರೀಂ ಕೋರ್ಟ್ ಕೇಂದ್ರ ಸರಕಾರಕ್ಕೆ ಸೂಚಿಸಿದೆ. ವಿವಾಹದ ವೆಚ್ಚದ ವಿವರವನ್ನು ಎರಡೂ ಕಡೆಯ ಕುಟುಂಬಗಳು ಸಲ್ಲಿಸಲು ಕಾನೂನು ಹಾಗೂ ನಿಯಮಗಳ ತಿದ್ದುಪಡಿಗೆ ಸರಕಾರ ಪರಿಶೀಲನೆ ನಡೆಸಬೇಕು.
ಈ ಕ್ರಮ ವರದಕ್ಷಿಣೆ ಬೇಡಿಕೆ ಒಡ್ಡುವುದನ್ನು ಅನುತ್ತೇಜಿಸುತ್ತದೆ ಹಾಗೂ ಇದೇ ಸಂದರ್ಭ ವರದಕ್ಷಿಣೆ ನಿಷೇಧ ಕಾನೂನು ಅಡಿ ನಕಲಿ ಪ್ರಕರಣ ದಾಖಲಿಸುವುದನ್ನು ನಿವಾರಿಸುತ್ತದೆ. ಭವಿಷ್ಯದಲ್ಲಿ ವರದಕ್ಷಿಣೆ ಕುರಿತ ಆರೋಪ ತಪ್ಪಿಸಲು ವಿವಾಹದ ವೆಚ್ಚದ ವಿವರವನ್ನು ಎರಡೂ ಕುಟುಂಬಗಳು ವ್ಯಾಪ್ತಿಯ ಒಳಗಿರುವ ವಿವಾಹ ನೋಂದಣಿ ಅಧಿಕಾರಿಗಳಿಗೆ ಸಲ್ಲಿಸಬಹುದೇ ಎಂಬುದನ್ನು ಪರಿಶೀಲಿಸ ಬಹುದು ಎಂದು ನ್ಯಾಯಾಲಯ ತನ್ನ ಆದೇಶದಲ್ಲಿ ಹೇಳಿದೆ. ಮುಂದಿನ ನಿರ್ದಿಷ್ಟ ಅಗತ್ಯತೆಗಳನ್ನು ಪೂರೈಸಲು ವಿವಾಹ ವೆಚ್ಚದ ಒಂದು ಭಾಗವನ್ನು ಪತ್ನಿಯ ಬ್ಯಾಂಕ್ ಖಾತೆಯಲ್ಲಿ ಠೇವಣಿ ಮಾಡಬಹುದು ಎಂದು ಕೂಡ ಸುಪ್ರೀಂ ಕೋರ್ಟ್ ಹೇಳಿದೆ. ಈ ವಿಷಯದ ಕುರಿತಂತೆ ಸುಪ್ರೀಂ ಕೋರ್ಟ್ ಕೇಂದ್ರ ಸರಕಾರಕ್ಕೆ ನೋಟೀಸು ನೀಡಿದೆ ಹಾಗೂ ಪ್ರತಿಕ್ರಿಯೆ ನೀಡುವಂತೆ ತಿಳಿಸಿದೆ.
‘‘ಕೇಂದ್ರ ಸರಕಾರಕ್ಕೆ ನೋಟೀಸು ನೀಡಲಾಗಿದೆ. ನ್ಯಾಯಾಲಯಕ್ಕೆ ನೆರವು ನೀಡಲು ಹೆಚ್ಚುವರಿ ಸಾಲಿಸಿಟರ್ ಜನರಲ್ ಪಿ.ಎಸ್. ನರಸಿಂಹ ಅವರಿಂದ ಮಾಹಿತಿ ಪಡೆಯಿರಿ’’ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ವೈವಾಹಿಕ ವಿವಾದ ಪ್ರಕರಣವೊಂದರಲ್ಲಿ ಮಹಿಳೆಯೋರ್ವಳು ತನ್ನ ಪತ್ನಿ ಹಾಗೂ ಕುಟುಂಬದ ವಿರುದ್ಧ ಮಾಡಿದ ಆರೋಪ ಹಾಗೂ ಅದನ್ನು ಪತಿ ಹಾಗೂ ಆತನ ಕುಟುಂಬದ ನಿರಾಕರಿಸದ ಬಗ್ಗೆ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಈ ಅಭಿಪ್ರಾಯ ವ್ಯಕ್ತಪಡಿಸಿದೆ.





