ಬೈಕ್ ಢಿಕ್ಕಿ: ಸೈಕಲ್ ಸವಾರ ಮೃತ್ಯು

ಕೋಟ, ಜು.12: ಬೈಕ್ ಸವಾರನೊಬ್ಬನ ಅತಿ ವೇಗ ಹಾಗೂ ನಿರ್ಲಕ್ಷದ ಚಾಲನೆಗೆ ಸಿಲುಕಿದ ಸೈಕಲ್ ಸವಾರರೊಬ್ಬರು ಮೃತಪಟ್ಟ ಘಟನೆ ಐರೋಡಿ ಗ್ರಾಮದ ರಾಷ್ಟ್ರೀಯ ಹೆದ್ದಾರಿ-66ರಲ್ಲಿ ನಂದಿನಿ ಹೊಟೇಲ್ ಎದುರು ಬುಧವಾರ ರಾತ್ರಿ 8:10ರ ಸುಮಾರಿಗೆ ನಡೆದಿದೆ.
ಮೃತರನ್ನು ಬಾರಕೂರು ಬೆಣ್ಣೆಕುದ್ರು ಗ್ರಾಮದ ಮಧುಕರ ಬಿ.(52) ಎಂದು ಗುರುತಿಸಲಾಗಿದೆ. ಇವರು ತನ್ನ ಮನೆಯಿಂದ ಸಾಸ್ತಾನದ ಪತ್ನಿಯ ಮನೆಗೆ ಸೈಕಲ್‌ನಲ್ಲಿ ಹೋಗುತಿದ್ದು, ರಸ್ತೆ ದಾಟಲು ಸೈಕಲ್‌ನೊಂದಿಗೆ ರಸ್ತೆ ಬದಿ ನಿಂತಿದ್ದಾಗ ಅತಿ ವೇಗದಿಂದ ಧಾವಿಸಿ ಬಂದ ಬೈಕ್ ಸವಾರ ಗಿರೀಶ್ ಆಚಾರ್ ಏಕಮುಖ ಸಂಚಾರ ವ್ಯವಸ್ಥೆಯಲ್ಲಿ ತೀರಾ ಪೂರ್ವಬದಿಗೆ ಬಂದು ಅಲ್ಲಿ ನಿಂತಿದ್ದ ಮಧುಕರರಿಗೆ ಢಿಕ್ಕಿ ಹೊಡೆದಿದ್ದರು.
ಇದರಿಂದ ರಸ್ತೆಗೆ ಬಿದ್ದ ಮಧುಕರ್ ಅವರ ತಲೆ ಹಾಗೂ ದೇಹದ ಇತರ ಭಾಗಗಳಿಗೆ ಗಾಯವಾಗಿದ್ದು, ಕೂಡಲೇ ಗಾಯಾಳುವನ್ನು ಚಿಕಿತ್ಸೆಗಾಗಿ ಮಣಿಪಾಲ ಕೆಎಂಸಿಗೆ ಸೇರಿಸಲಾಗಿತ್ತು. ಆದರೆ ಚಿಕಿತ್ಸೆಗೆ ಸ್ಪಂಧಿಸದ ಮಧುಕರ್ ಇಂದು ಮುಂಜಾನೆ ಮೃತಪಟ್ಟರು ಎಂದು ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ಕೋಟ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





