ಮೈಸೂರು: ಉಚಿತ ಬಸ್ ಪಾಸ್ ನೀಡಲು ಒತ್ತಾಯಿಸಿ ಬಿವಿಎಸ್ ಧರಣಿ
ಮೈಸೂರು,ಜು.12: ಉಚಿತ ಬಸ್ ಪಾಸ್ ವ್ಯವಸ್ಥೆಯನ್ನು ಎಲ್ಲಾ ಸಮುದಾಯದ ವಿದ್ಯಾರ್ಥಿಗಳಿಗೂ ಕಲ್ಪಿಸಿಕೊಡುವಂತೆ ಒತ್ತಾಯಿಸಿ ಬಹುಜನ ವಿದ್ಯಾರ್ಥಿ ಸಂಘದ ವತಿಯಿಂದ ಪ್ರತಿಭಟನೆ ನಡೆಯಿತು.
ಜಿಲ್ಲಾಧಿಕಾರಿಗಳ ಕಚೇರಿ ಎದುರು ಗುರುವಾರ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡ ಪ್ರತಿಭಟನಾಕಾರರು ಮಾತನಾಡಿ, ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ನೇತೃತ್ವದ ರಾಜ್ಯ ಸಮ್ಮಿಶ್ರ ಸರ್ಕಾರ ಕಳೆದ ಸರ್ಕಾರದ ಯೋಜನೆಯಾದ ಎಸ್.ಸಿ/ಎಸ್.ಟಿ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ಯೋಜನೆಯನ್ನು 2018-19ನೇ ಶೈಕ್ಷಣಿಕ ಸಾಲಿಗೂ ಮುಂದುವರಿಸಿರುವುದು ಸ್ವಾಗತಾರ್ಹ ಕ್ರಮ. ಆದರೆ ಇತರೆ ಹಿಂದುಳಿದ ಜಾತಿಗಳು ಮತ್ತು ಧಾರ್ಮಿಕ ಅಲ್ಪ ಸಂಖ್ಯಾತರ ಸಮುದಾಯದ ಇತರೇ ಸಾಮಾನ್ಯ ವರ್ಗದ ವಿದ್ಯಾರ್ಥಿಗಳನ್ನು ಕಡೆಗಣಿಸಿರುವುದು ಖಂಡನಾರ್ಹ. ಸರ್ಕಾರದ ಈ ನಿರ್ಧಾರದಿಂದಾಗಿ ಇತರೇ ಸಮುದಾಯದ ವಿದ್ಯಾರ್ಥಿಗಳು ದಲಿತ ವಿದ್ಯಾರ್ಥಿಗಳನ್ನು ಅವಮಾನಿಸುವ ಪ್ರತ್ಯೇಕಿಸುವ ಕೆಲಸಕ್ಕೆ ಸಹಜವಾಗಿಯೇ ಇಳಿಯುವಂತಾಗಿದೆ ಎಂದು ಆರೋಪಿಸಿದರು.
ರಾಜ್ಯ ಸರ್ಕಾರ ದಲಿತರ ಶ್ರೇಯೋಭಿವೃದ್ಧಿಯನ್ನು ಬಯಸುವುದಾದರೆ ಖಾಸಗಿ ಕ್ಷೇತ್ರದಲ್ಲಿ ಮೀಸಲಾತಿಯನ್ನು ನೀಡುವ ಬ್ಯಾಕ್ ಲಾಗ್ ಹುದ್ದೆಗಳನ್ನು ಭರ್ತಿ ಮಾಡುವ ಹಾಸ್ಟೆಲ್ ವಿದ್ಯಾರ್ಥಿಗಳ ಊಟದ ಭತ್ಯೆ ಹಾಗೂ ವಿದ್ಯಾರ್ಥಿ ವೇತನವನ್ನು ಹೆಚ್ಚಿಸುವ, ಸರ್ಕಾರಿ ಶಾಲೆಗಳಲ್ಲಿ ಉದ್ಯೋಗಾಧಾರಿತ ಗುಣಮಟ್ಟದ ಶಿಕ್ಷಣ ಮತ್ತು ಪ್ರಾಥಮಿಕ ಹಂತದಲ್ಲಿ ಇಂಗ್ಲಿಷ್ ಶಿಕ್ಷಣವನ್ನು ನೀಡುವಂತಹ ದಿಟ್ಟ ನಿರ್ಧಾರವನ್ನು ಕೈಗೊಳ್ಳಬೇಕು. ಇದನ್ನು ಹೊರತುಪಡಿಸಿ ಸರ್ಕಾರ ಕೈಗೊಂಡಿರುವ ಇಂತಹ ಯೋಜನೆಗಳಿಂದ ಅನಾನುಕೂಲಗಳೇ ಹೆಚ್ಚಿವೆ. ಆದ್ದರಿಂದ ಈ ಸೌಲಭ್ಯವನ್ನು ರಾಜ್ಯದ ಎಲ್ಲಾ ಸಮುದಾಯದ ವಿದ್ಯಾರ್ಥಿಗಳಿಗೆ ವಿಸ್ತರಿಸುವಂತೆ ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಜಿಲ್ಲಾ ಸಂಯೋಜಕ ವಸಂತ್, ನಗರ ಸಂಯೋಜಕ ಶಾಕ್ಯಗಣಿ, ಜಿಲ್ಲಾಧ್ಯಕ್ಷ ನವೀನ್ ಮೌರ್ಯ, ಸಾಗರ್, ರಾಜೇಶ್, ಪ್ರತಾಪ್ ಕವಲಂದೆ, ನಾರಾಯಣಸ್ವಾಮಿ, ರಮೇಶ್ ತಾಯೂರು, ಸಂತೋಷ್, ಹೂವಿನ ಸಿದ್ದು, ಮಹೇಶ್, ಮಧುಸೂದನ್, ರವಿಕುಮಾರ್ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.