ಅಧಿಕಾರಿಗಳು ಹೆಚ್ಚು ಜವಾಬ್ದಾರಿಯಿಂದ ಕೆಲಸ ನಿರ್ವಹಿಸಬೇಕು: ಜಿಪಂ ಅಧ್ಯಕ್ಷೆ ಸುಜಾತಾ ಕೃಷ್ಣಪ್ಪ
ಚಿಕ್ಕಮಗಳೂರು
ಚಿಕ್ಕಮಗಳೂರು, ಜು.12: ಸರಕಾರದಿಂದ ಬರುವ ಅನುದಾನದ ಬಗ್ಗೆ ಚುನಾಯಿತ ಪ್ರತಿನಿಧಿಗಳಿಗೆ ಅಧಿಕಾರಿಗಳು ಸರಿಯಾದ ಮಾಹಿತಿ ನೀಡಿ ಅಭಿವೃದ್ಧಿ ಕೆಲಸಗಳಿಗೆ ಹೆಚ್ಚು ಜವಾಬ್ದಾರಿ ತೆಗೆದುಕೊಂಡು ಕೆಲಸ ನಿರ್ವಹಿಸಬೇಕೆಂದು ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಸುಜಾತಾ ಕೃಷ್ಣಪ್ಪ ತಿಳಿಸಿದರು.
ಗುರುವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಹಣಕಾಸು ಲೆಕ್ಕಪರಿಶೋಧನೆ ಮತ್ತು ಯೋಜನಾ ಸ್ಥಾಯಿಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಮೂಡಿಗೆರೆ ಕೊಪ್ಪ ಶೃಂಗೇರಿ, ಭಾಗದಲ್ಲಿ ಹೆಚ್ಚು ಮಳೆಯಿಂದ ರಸ್ತೆ, ಸೇತುವೆ, ಗುಡ್ಡ, ಮರ ಕುಸಿಯುವುದರ ಜೊತೆಗೆ ಮನೆಗಳು ಸಹ ಬಿದ್ದು ಹೋಗಿವೆ. ಕಡೂರು, ಬೀರೂರು, ತರೀಕೆರೆ ಭಾಗದಲ್ಲಿ ಮಳೆ ಇಲ್ಲದೆಯೇ ಅನೇಕ ಸಮಸ್ಯೆಗಳಿವೆ. ಅಧಿಕಾರಿಗಳು ಸ್ಥಳ ಪರಿಶೀಲನೆ ಮಾಡಿ ವರದಿ ಸಲ್ಲಿಸಬೇಕು ಎಂದರು.
ಜಿಲ್ಲೆಯಲ್ಲಿ ಅತಿವೃಷ್ಠಿ ಮತ್ತು ಅನಾವೃಷ್ಠಿಯಿಂದ ಆಗಿರುವ ಸಮಸ್ಯೆಗಳನ್ನು ಶಾಸಕರ ಬಳಿ ಚರ್ಚಿಸಿ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಪತ್ರ ಬರೆಯುವುದರ ಜೊತೆಗೆ ವಿಶೇಷ ಅನುದಾನ ನೀಡುವಂತೆ ಮನವಿ ಮಾಡಿಕೊಳ್ಳಲಾಗುವುದು ಎಂದು ತಿಳಿಸಿದರು. ಸಭೆಗಳಿಗೆ ಅಧಿಕಾರಿಗಳು ಸರಿಯಾದ ಅನುಪಾಲನ ವರದಿ ನೀಡುವುದರ ಜೊತೆಗೆ ಕಡ್ಡಾಯವಾಗಿ ಸಭೆಗೆ ಭಾಗವಹಿಸಬೇಕು. ಬರದೆ ಇರುವ ಅಧಿಕಾರಿಗಳಿಗೆ ಮುಂದಿನ ದಿನಗಳಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.
ಸರ್ಕಾರ ರೈತರಿಗೆ ಮತ್ತು ಸ್ವಉದ್ಯೋಗ ಮಾಡುವವರಿಗೆ ಅನೇಕ ಸೌಲಭ್ಯಗಳನ್ನು ನೀಡುತ್ತಿದೆ. ಕೃಷಿ ಇಲಾಖೆ ವತಿಯಿಂದ ಜೇನು ಕೃಷಿ, ಅಣಬೆ ಬೇಸಾಯ, ರೇಷ್ಮೆ ಕೃಷಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಈ ಎಲ್ಲಾ ಕಾರ್ಯಕ್ರಮಗಳಲ್ಲೂ ಒಬ್ಬರೇ ಫಲಾನುಭವಿಗಳು ಇರುತ್ತಾರೆ ಎಂದು ಜಿಪಂ ಸದಸ್ಯ ಶಾಮಣ್ಣ ಬಣಕಲ್ ತಿಳಿಸಿದರು.
ಈ ಸಂದರ್ಭದಲ್ಲಿ ಜಿಪಂ ಸದಸ್ಯರಾದ ಚೈತ್ರಶ್ರೀ, ಶಕುಂತಲಾ ಮಲ್ಲಪ್ಪ, ಚಂದ್ರಮ್ಮ, ಉಪಕಾರ್ಯದರ್ಶಿ ರಾಜಗೋಪಾಲ್, ಉಪಸ್ಥಿತರಿದ್ದರು.