ಪದವಿ ಜೊತೆಗೆ ಆನ್‌ಲೈನ್ ಕೋರ್ಸ್ ಕಡ್ಡಾಯ: ಬೆಂಗಳೂರು ವಿ.ವಿ ಕುಲಪತಿ ವೇಣುಗೋಪಾಲ್

ಬೆಂಗಳೂರು, ಜು.13: ವಿಶ್ವವಿದ್ಯಾಲಯದ ಅನುದಾನ ಆಯೋಗದ ಮಾರ್ಗಸೂಚಿಯಂತೆ ಪದವಿ ಜೊತೆಗೆ ಆನ್‌ಲೈನ್ ಕೋರ್ಸ್‌ಗಳು(ಮೂಕ್ಸ್) ಕಡ್ಡಾಯಗೊಳಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಡಾ.ವೇಣುಗೋಪಾಲ್ ತಿಳಿಸಿದರು.
ಶುಕ್ರವಾರ ನಗರದ ಜ್ಞಾನಜ್ಯೋತಿ ಸಭಾಂಗಣದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ವಿಶ್ವವಿದ್ಯಾಲಯದ ವತಿಯಿಂದಲೆ ಸುಮಾರು 2 ಸಾವಿರ ಆಲ್‌ನೈನ್(ಮೂಕ್ಸ್) ಕೋರ್ಸ್‌ಗಳನ್ನು ತೆರೆಯಲಾಗುವುದು. ಇದರಲ್ಲಿ ಯಾವುದಾದರು ಒಂದು ಕೋರ್ಸ್‌ನ್ನು ಪದವಿ ಹಾಗೂ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳು ತೆಗೆದುಕೊಳ್ಳುವುದು ಕಡ್ಡಾಯವೆಂದು ತಿಳಿಸಿದರು.
ಆನ್‌ಲೈನ್‌ನಲ್ಲಿ ಅಂಕಪಟ್ಟಿ: ಮುಂದಿನ ಶೈಕ್ಷಣಿಕ ಸಾಲಿನಿಂದ ಪ್ರಶ್ನೆ ಪತ್ರಿಕೆಗಳನ್ನು ಆನ್‌ಲೈನ್ ಮೂಲಕ ಪರೀಕ್ಷಾ ಕೇಂದ್ರಗಳಿಗೆ ಒದಗಿಸಲಾಗುವುದು. ಅಂಕಪಟ್ಟಿಯನ್ನೂ ಆನ್‌ಲೈನ್‌ನಲ್ಲಿ ಸಿಗುವಂತೆ ಮಾಡಲು ಚಿಂತನೆ ನಡೆಸಲಾಗುತ್ತಿದೆ. ಹಾಗೂ ವಿದ್ಯಾರ್ಥಿಗಳಿಗೆ ಮತ್ತು ಉದ್ಯೋಗ ನೀಡುವ ಸಂಸ್ಥೆಗಳಿಗೆ ಅನುಕೂಲವಾಗುವಂತೆ ಪದವಿ ಪ್ರಮಾಣ ಪತ್ರ, ಅಂಕಪಟ್ಟಿಗಳನ್ನು ಯುಜಿಸಿ ಕಾರ್ಯಕ್ರಮವಾದ ನ್ಯಾಷನಲ್ ಅಕಾಡೆಮಿಕ್ ಡೆಪಾಸಿಟರಿ(ಎನ್‌ಎಡಿ)ಯಲ್ಲಿ ಅಳವಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.
ಸಂಶೋಧನೆ ಕೈಗೊಳ್ಳುವ ಯುವಶಿಕ್ಷಕರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ವಿಶ್ವವಿದ್ಯಾಲಯದಲ್ಲಿ ಸಂಶೋಧನಾ ನಿಧಿಯನ್ನು ಸ್ಥಾಪಿಸಲಾಗುವುದು. ಉತ್ತಮ ಸಾಧನೆ ಮಾಡಿದ ಸಂಶೋಧನಾ ವಿದ್ಯಾರ್ಥಿಗಳಿಗೆ ಪ್ರತಿ ವರ್ಷ ಬಹುಮಾನವನ್ನು ನೀಡಲಾಗುತ್ತದೆ ಎಂದು ಅವರು ತಿಳಿಸಿದರು.
ವಿಶ್ವವಿದ್ಯಾಲಯದ ವಿಶ್ವೇಶ್ವರಯ್ಯ ಎಂಜಿನಿಯರಿಂಗ್ ಕಾಲೇಜ(ಯುವಿಸಿಇ)ನ್ನು ಸ್ವಾಯತ್ತ ಸಂಸ್ಥೆಯ ಸ್ಥಾನಮಾನ ಪಡೆಯಲು ರಾಷ್ಟ್ರೀಯ ಮೌಲ್ಯಾಂಕನ ಮಂಡಳಿಯಿಂದ (ಎನ್‌ಬಿಎ) ಮೌಲ್ಯಾಂಕನ ಪಡೆಯಲು ಅಗತ್ಯವಿದೆ. ಈ ನಿಟ್ಟಿನಲ್ಲಿ ಯುವಿಸಿಇಯಲ್ಲಿ ಖಾಲಿ ಇರುವ ಸಮಾರು 150ಕ್ಕೂ ಹೆಚ್ಚು ಶಿಕ್ಷಕ ಹಾಗೂ ಶಿಕ್ಷಕೇತರ ಹುದ್ದೆಗಳನ್ನು ಕೆಲವೆ ತಿಂಗಳಲ್ಲಿ ತುಂಬಲಾಗುವುದು ಎಂದು ಅವರು ಹೇಳಿದರು.
ಸದ್ಯ ಬೆಂಗಳೂರು ವಿಶ್ವವಿದ್ಯಾಲಯವು ವಾರ್ಷಿಕವಾಗಿ ಸುಮಾರು 80 ಲಕ್ಷ ರೂ. ವಿದ್ಯುತ್ ಶುಲ್ಕವನ್ನು ಪಾವತಿಸುತ್ತಿದೆ. ಈ ವೆಚ್ಚವನ್ನು ಕಡಿತಗೊಳಿಸುವ ಸಲುವಾಗಿ ಸೌರಶಕ್ತಿಯನ್ನು ಉಪಯೋಗಿಸಿಕೊಳ್ಳಲು ವಿಶ್ವವಿದ್ಯಾಲಯದ ಕಟ್ಟಡಗಳ ಮೇಲೆ ಸೋಲಾರ್ ಪ್ಯಾನೆಲ್‌ಗಳನ್ನು ಅಳವಡಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದರು.
ಬೆಂಗಳೂರು ವಿಶ್ವವಿದ್ಯಾಲಯದ 116 ಶಿಕ್ಷಕೇತರ ನೌಕರರಿಗೆಈಗಾಗಲೆ ಮುಂಬಡ್ತಿ ನೀಡಲಾಗಿದೆ. ಇದರ ಜತೆಗೆ ಶಿಕ್ಷಕ ಮತ್ತು ಶಿಕ್ಷಕೇತರ ಸಿಬ್ಬಂದಿಗಳಿಗೆ ಬಯೋವೆುಟ್ರಿಕ್ ಹಾಜರಾತಿಯನ್ನು ಕಡ್ಡಾಯಗಳಿಸಿ, ಸಿಬ್ಬಂದಿಗಳಿಗೆ ಆಡಳಿತಾತ್ಮಕ ತರಬೇತಿ ನೀಡಲಾಗುವುದು. ಹಾಗೂ ವಿಶ್ವವಿದ್ಯಾಲಯದ ಹಾಸ್ಟೆಲ್‌ಗಳ ಎಲ್ಲ ವಿದ್ಯಾರ್ಥಿಗಳ ಊಟೋಪಚಾರ ವ್ಯವಸ್ಥೆಗೆ ಮೆಗಾ ಮೆಸ್ ನಿರ್ಮಾಣ ಮಾಡಲು ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ಹೇಳಿದರು.
ರಾಮನಗರದ ಸ್ನಾತಕೋತ್ತರ ಕೇಂದ್ರದಲ್ಲಿ ಪ್ರಸ್ತುತ ಇರುವ ಎಂಕಾಂ ಮತ್ತು ಎಂಎ(ಅರ್ಥಶಾಸ್ತ್ರ) ಕೋರ್ಸ್‌ನೊಂದಿಗೆ ಎಂಎಸ್ಸಿ(ಗಣಿತ), ಎಂಎ(ಕನ್ನಡ), ಎಂಎ(ಇತಿಹಾಸ), ಎಂಎ(ರಾಜ್ಯಶಾಸ್ತ್ರ), ಎಂಎ(ಸಮಾಜಶಾಸ್ತ್ರ), ಎಂಎ (ಗ್ರಾಮೀಣಾಭಿವೃದ್ಧಿ) ಹಾಗೂ ಎಂಎಸ್‌ಡಬ್ಸು ಹೊಸದಾಗಿ ಪ್ರಾರಂಭಿಸಲಾಗುತ್ತಿದೆ. ಇದರ ಜೊತೆಗೆ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳ ಔದ್ಯೋಗಿಕ ಹಿತದೃಷ್ಟಿಯಿಂದ ಸುಮಾರು 26ಹೊಸ ಕೋರ್ಸ್‌ಗಳನ್ನು ಪ್ರಾರಂಭಿಸಲಾಗುತ್ತಿದೆ.
-ಡಾ.ವೇಣುಗೋಪಾಲ್, ಕುಲಪತಿ, ಬೆಂವಿವಿ







