ತೋಟಗಾರಿಕಾ ವಲಯ ಬಲಪಡಿಸಲು ಸರಕಾರಕ್ಕೆ ಡಾ.ಸ್ವಾಮಿನಾಥನ್ ಸಲಹೆ

ಬೆಂಗಳೂರು, ಜು.13: ಖ್ಯಾತ ಕೃಷಿ ತಜ್ಞ, ಹಸಿರು ಕ್ರಾಂತಿಯ ಪಿತಾಮಹ ಡಾ. ಎಂ.ಎಸ್.ಸ್ವಾಮಿನಾಥನ್ ಶುಕ್ರವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿಯನ್ನು ಭೇಟಿ ಮಾಡಿದರು. ಇದೇ ಸಂದರ್ಭದಲ್ಲಿ ರೈತರ ಆರ್ಥಿಕ ಸ್ಥಿತಿಗತಿ ಸುಧಾರಣೆಗಾಗಿ ಮಾರ್ಗದರ್ಶನ ನೀಡುವಂತೆ ಅವರಲ್ಲಿ ಮುಖ್ಯಮಂತ್ರಿ ಮನವಿ ಮಾಡಿದರು.
ದೇಶದಲ್ಲಿಯೇ ಅತ್ಯುತ್ತಮ ಸಂಸದೀಯ ವ್ಯವಸ್ಥೆ ಹೊಂದಿರುವ ರಾಜ್ಯ ಕರ್ನಾಟಕ ಎಂದು ಮೆಚ್ಚುಗೆ ವ್ಯಕ್ತಪಡಿಸಿದ ಸ್ವಾಮಿನಾಥನ್, ತೋಟಗಾರಿಕೆಯನ್ನು ಬಲಪಡಿಸುವುದರಿಂದ ರೈತರು ಆರ್ಥಿಕವಾಗಿ ಸದೃಢರಾಗಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.
ಇಂದು ಕೃಷಿ ಉತ್ಪಾದಕತೆ ಮಾತ್ರವಲ್ಲ, ಆದಾಯಕ್ಕೂ ಆದ್ಯತೆ ನೀಡಬೇಕಾಗಿದೆ. ಇದಕ್ಕಾಗಿ ಹೆಚ್ಚಿನ ಬೆಲೆ ಹೊಂದಿರುವ ಬೆಳೆಗಳನ್ನು ಬೆಳೆಯಲು ಆದ್ಯತೆ ನೀಡುವಂತೆ ಸಲಹೆ ನೀಡಿದರು. ಅಲ್ಲದೆ, ಕರ್ನಾಟಕವು ಗಣನೀಯ ಪ್ರಮಾಣದ ಕರಾವಳಿ ಭಾಗವನ್ನೂ ಹೊಂದಿರುವುದರಿಂದ ಸಮುದ್ರ ಕೃಷಿಯನ್ನು ಕೈಗೆತ್ತಿಕೊಳ್ಳುವ ಅವಕಾಶಗಳಿವೆ ಎಂದು ಅವರು ತಿಳಿಸಿದರು.
ಪ್ರತ್ಯೇಕ ತೋಟಗಾರಿಕಾ ಇಲಾಖೆಯನ್ನು ಹೊಂದಿರುವ ಮೊದಲ ರಾಜ್ಯ ಕರ್ನಾಟಕ ಎಂಬುದರ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ ಸ್ವಾಮಿನಾಥನ್, ಮಣ್ಣು, ನೀರು ಹಾಗೂ ಜೀವವೈವಿಧ್ಯ ಸಂರಕ್ಷಣೆಯನ್ನು ಗಮನದಲ್ಲಿರಿಸಿಕೊಂಡು ಸುಧಾರಣಾ ಕ್ರಮಗಳನ್ನು ಕೈಗೊಳ್ಳುವಂತೆ ತಿಳಿಸಿದರು. ಈ ನಿಟ್ಟಿನಲ್ಲಿ ಇಸ್ರೇಲ್ ಮಾದರಿ ನೀರಾವರಿ ಸಹಕಾರಿ, ಕೃಷಿ ಉತ್ಪನ್ನ ಸಂಸ್ಕರಣೆ ಮತ್ತು ಕೃಷಿ ಆಧಾರಿತ ಕೈಗಾರಿಕೆಗಳ ಸ್ಥಾಪನೆಗೆ ಆದ್ಯತೆ ನೀಡುವಂತೆ ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯಮಂತ್ರಿ ಕುಮಾರಸ್ವಾಮಿ, ನಿಮ್ಮ ಸಲಹೆಯನ್ನು ರಾಜ್ಯದ ಕೃಷಿ ವ್ಯವಸ್ಥೆಯಲ್ಲಿ ಅಳವಡಿಸಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಸ್ವಾಮಿನಾಥನ್ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ, ರೈತರ ಸುಸ್ಥಿರ ಬದುಕಿಗಾಗಿ ರಾಜ್ಯ ಸರಕಾರ ಅಗತ್ಯ ಕ್ರಮಗಳನ್ನು ಕೈಗೊಳ್ಳಲಿದೆ. ಕೃಷಿಕರನ್ನು ಆರ್ಥಿಕವಾಗಿ ಸದೃಢಗೊಳಿಸಲು ನಾಡಿನ ಕೃಷಿ ಪದ್ಧತಿ, ನೀರಾವರಿಯಲ್ಲಿ ಹಲವು ಮಾರ್ಪಾಡು ಮಾಡಲು ಉದ್ದೇಶಿಸಿದೆ. ಈ ನಿಟ್ಟಿನಲ್ಲಿ 93 ವರ್ಷಗಳ ಹಿರಿಯರಾದ ಡಾ.ಸ್ವಾಮಿನಾಥನ್ ಆಗಮಿಸಿ ಮಾರ್ಗದರ್ಶನ ನೀಡಿರುವುದಕ್ಕಾಗಿ ಅವರನ್ನು ಅಭಿನಂದಿಸಿದರು.
ಶೀಘ್ರವೇ ಜಿಲ್ಲಾಮಟ್ಟದ ಕೃಷಿ ಮತ್ತು ಸಂಬಂಧಿಸಿದ ಕ್ಷೇತ್ರಗಳ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಕೃಷಿ ಕ್ಷೇತ್ರದ ನ್ಯೂನತೆಗಳ ಕುರಿತು ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಲಾಗುವುದು ಎಂದು ಕುಮಾರಸ್ವಾಮಿ ತಿಳಿಸಿದರು.
ಈ ಸಂದರ್ಭದಲ್ಲಿ ಕೃಷಿ ಸಚಿವ ಎನ್.ಎಚ್.ಶಿವಶಂಕರ ರೆಡ್ಡಿ, ತೋಟಗಾರಿಕಾ ಸಚಿವ ಎಂ.ಸಿ.ಮನಗೂಳಿ, ಪಶುಸಂಗೋಪನೆ ಮತ್ತು ಮೀನುಗಾರಿಕಾ ಸಚಿವ ವೆಂಕಟರಾವ್ ನಾಡಗೌಡ, ಸರಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್, ಅಪರ ಮುಖ್ಯ ಕಾರ್ಯದರ್ಶಿ ಡಿ.ವಿ.ಪ್ರಸಾದ್, ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್, ಕೃಷಿ ಇಲಾಖೆ ಕಾರ್ಯದರ್ಶಿ ಡಾ. ಯು.ಎಂ.ಮಹೇಶ್ವರರಾವ್ ಸೇರಿದಂತೆ ಇನ್ನಿತರ ಹಿರಿಯ ಅಧಿಕಾರಿಗಳು ಹಾಜರಿದ್ದರು.







