ಏಷ್ಯಾದ ಅತ್ಯಂತ ಶ್ರೀಮಂತ ವ್ಯಕ್ತಿ ಜ್ಯಾಕ್ ಮಾರನ್ನು ಹಿಂದಿಕ್ಕಲಿರುವ ಮುಕೇಶ್ ಅಂಬಾನಿ

ಹೊಸದಿಲ್ಲಿ, ಜು.13: ತನ್ನ ರಿಲಾಯನ್ಸ್ ಇಂಡಸ್ಟ್ರೀಸ್ ಮೂಲಕ ಭಾರತದ ಇ-ಕಾಮರ್ಸ್ ಕ್ಷೇತ್ರದಲ್ಲಿ ಕ್ರಾಂತಿ ಉಂಟುಮಾಡಲು ಮುಂದಾಗಿರುವ ಮುಕೇಶ್ ಅಂಬಾನಿ ಏಷ್ಯಾದ ಅತ್ಯಂತ ಶ್ರೀಮಂತ ಪಟ್ಟಿಯಿಂದ ಅಲಿಬಾಬಾ ಗ್ರೂಪ್‌ನ ಸ್ಥಾಪಕ ಜ್ಯಾಕ್ ಮಾರನ್ನು ಹಿಂದಿಕ್ಕಲಿದ್ದಾರೆ ಎಂದು ವರದಿಯೊಂದು ತಿಳಿಸಿದೆ.
ಬ್ಲೂಂಬರ್ಗ್ ಬಿಲಿಯನೇರ್ಸ್ ಸೂಚಿಯ ಪ್ರಕಾರ, ತೈಲ ಶುದ್ಧೀಕರಣದಿಂದ ದೂರಸಂಪರ್ಕ ಕ್ಷೇತ್ರದವರೆಗೂ ತಮ್ಮ ಅಧಿಪತ್ಯವನ್ನು ಸ್ಥಾಪಿಸಿರುವ ಮುಕೇಶ್ ಅಂಬಾನಿಯ ಆಸ್ತಿ ಮೌಲ್ಯ ಶುಕ್ರವಾರದ ವೇಳೆಗೆ 44.3 ಬಿಲಿಯನ್ ಡಾಲರ್ (3.03 ಟ್ರಿಲಿಯನ್ ರೂ.- 1 ಲಕ್ಷ ಕೋಟಿ ರೂ. ಎಂದರೆ ಒಂದು ಟ್ರಿಲಿಯನ್) ತಲುಪಿದೆ. ಶುಕ್ರವಾರದಂದು ರಿಲಾಯನ್ಸ್ ಇಂಡಸ್ಟ್ರೀಸ್ ಶೇರುಗಳಲ್ಲಿ ಶೇ.1.7 ಏರಿಕೆಯಾಗಿದ್ದು ಮಧ್ಯಾಹ್ನದ ವೇಳೆಗೆ ಪ್ರತಿ ಶೇರು ಬೆಲೆ 1,100.65ರೂ ತಲುಪಿತ್ತು. ಇದೇ ವೇಳೆ ಜ್ಯಾಕ್ ಮಾ ಸಂಪತ್ತಿನ ಮೌಲ್ಯ 44 ಬಿಲಿಯನ್ ಡಾಲರ್ ಆಗಿತ್ತು. ರಿಲಾಯನ್ಸ್ ತನ್ನ ಪೆಟ್ರೋಕೆಮಿಕಲ್ಸ್ ಸಾಮರ್ಥ್ಯವನ್ನು ದುಪ್ಪಟ್ಟುಗೊಳಿಸಿದ ಮತ್ತು ರಿಲಾಯನ್ಸ್ ಜಿಯೊ ಇನ್ಫೊಕೊಮ್ ಲಿ.ನ ಯಶಸ್ಸಿನಿಂದಾಗಿ ಪ್ರಸಕ್ತ ವರ್ಷದಲ್ಲಿ ಅಂಬಾನಿ ಆಸ್ತಿಯಲ್ಲಿ ನಾಲ್ಕು ಬಿಲಿಯನ್ ಡಾಲರ್ ಹೆಚ್ಚಳವಾಗಿದೆ.
ಇ-ಕಾಮರ್ಸ್ ದೈತ್ಯರಾದ ಅಮೆಝಾನ್ ಮತ್ತು ವಾಲ್ಮಾರ್ಟ್‌ಗಳಿಗೆ ಸ್ಪರ್ಧೆಯೊಡ್ಡಲು ಮುಂದಾಗಿರುವ ರಿಲಾಯನ್ಸ್ ಅದಕ್ಕಾಗಿ ತನ್ನ 215 ಮಿಲಿಯನ್ ದೂರಸಂಪರ್ಕ ಗ್ರಾಹಕರನ್ನು ಬಳಸಿಕೊಳ್ಳುವ ಯೋಜನೆ ರೂಪಿಸುವುದಾಗಿ ಈ ತಿಂಗಳ ಆರಂಭದಲ್ಲಿ ಘೋಷಿಸಿತ್ತು.





