ಅನಧಿಕೃತ ವಾಹನ ನಿಲುಗಡೆ ವಿರುದ್ಧ ಕ್ರಮ; ಡಿಸಿಪಿ ಹನುಮಂತರಾಯ
ಫೋನ್‌ಇನ್ ಕಾರ್ಯಕ್ರಮ

ಮಂಗಳೂರು, ಜು.13: ಮದುವೆ ಹಾಲ್‌ಗಳ ಮುಂಭಾಗ ವಾಹನಗಳನ್ನು ನಿಲ್ಲಿಸುವುದರಿಂದ ಸಾರ್ವಜನಿಕರ ವಿನಾಕಾರಣ ಅಡಚಣೆ ಉಂಟಾ ಗುತ್ತಿದ್ದು, ಅನಧಿಕೃತವಾಗಿ ವಾಹನಗಳ ನಿಲುಗಡೆ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ ಹನುಮಂತರಾಯ ತಿಳಿಸಿದ್ದಾರೆ.
ನಗರದ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಶುಕ್ರವಾರ ನಡೆದ ಫೋನ್‌ಇನ್ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಅನಧಿಕೃತವಾಗಿ ರಸ್ತೆ ಪಕ್ಕದಲ್ಲಿ ನಿಲ್ಲಿಸುವ ವಾಹನಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ವಾಹನಗಳನ್ನು ಲಾಕ್ ಮಾಡಿ ಪ್ರಕರಣ ದಾಖಲಿಸಲು ಸಂಚಾರ ಎಸಿಪಿ ಮಂಜುನಾಥ್ ಶೆಟ್ಟಿ ಅವರಿಗೆ ಸೂಚಿಸಿದರು. ತೊಕ್ಕೊಟ್ಟು ಕಲ್ಲಾಪು ಬಳಿ ಇರುವ ಯುನಿಟಿ ಹಾಲ್‌ನಲ್ಲಿ ಮದುವೆ ಸಮಾರಂಭ ನಡೆಯುವ ಸಮಯದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ವಾಹನಗಳನ್ನು ರಸ್ತೆಯ ಇಕ್ಕೆಲಗಳಲ್ಲಿ ನಿಲ್ಲಿಸಲಾಗುತ್ತಿದೆ. ಇದರಿಂದ ಸಾರ್ವಜನಿಕರ ಸಂಚಾರಕ್ಕೆ ಅಡಚಣೆ ಉಂಟಾಗುತ್ತದೆ. ಸೂಕ್ತ ಕ್ರಮ ಕೈಗೊಳ್ಳಲು ಸ್ಥಳೀಯ ರತ್ನಾಕರ್ ದೂರಿನಲ್ಲಿ ಒತ್ತಾಯಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಡಿಸಿಪಿ ಹನುಮಂತರಾಯ, ತೊಕ್ಕೊಟ್ಟು ಬಳಿ ಫ್ಲೈಓವರ್ ಮೇಲ್ಸೆತುವೆ ನಿರ್ಮಾಣವಾಗುತ್ತಿರುವುದರಿಂದಲೂ ಸಂಚಾರಕ್ಕೆ ಅಡೆತಡೆಯಾಗುತ್ತಿದೆ. ಸೇತುವೆ ಕೆಳಬದಿ ವಾಹನಗಳನ್ನು ಬಿಡುವ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಬೈಕಂಪಾಡಿ ಬಳಿ ಇರುವ ಅಡ್ಕ ಹಾಲ್‌ನಲ್ಲಿ ಮದುವೆ ಕಾರ್ಯಕ್ರಮ ನಡೆಯುವ ವೇಳೆ ವಾಹನಗಳ ದಟ್ಟಣೆಯಿಂದಲೂ ಸಂಚಾರಕ್ಕೆ ಅಡಚಣೆಯಾಗುತ್ತಿದೆ ಎಂದು ಸ್ಥಳೀಯ ವಸಂತ್ ದೂರಿದರು. ಇದಕ್ಕೆ ಉತ್ತರಿಸಿದ ಡಿಸಿಪಿ, ಮದುವೆ ಹಾಲ್‌ಗಳಲ್ಲಿಯೇ ವಾಹನಗಳನ್ನು ಪಾರ್ಕಿಂಗ್ ಮಾಡಬೇಕು. ಹಾಲ್‌ನ ಹೊರಗೆ ರಸ್ತೆಗಳಲ್ಲಿ ನಿಲ್ಲಿಸುವ ವಾಹನಗಳನ್ನು ಲಾಕ್ ಮಾಡಿ, ಕ್ರಮ ಕೈಗೊಳ್ಳಲು ಸಂಚಾರ ವಿಭಾಗದ ಪೊಲೀಸರಿಗೆ ನಿರ್ದೇಶನ ನೀಡಿದರು.
ನರ್ಮ್ಸ್ ಬಸ್‌ಗಳಲ್ಲಿ ಮಹಿಳೆಯರಿಗಾಗಿ ಯಾವುದೇ ಸೀಟುಗಳ ಮೀಸಲಾತಿ ಕಲ್ಪಿಸಲಾಗಿಲ್ಲ. ಖಾಸಗಿ ಬಸ್‌ಗಳಲ್ಲಿ ಹಿರಿಯ ನಾಗರಿಕರಿಗೆ ಮೀಸಲಾಗಿರುವ ಒಂದು ಸೀಟಿನ ಬದಲು ಎರಡು ಸೀಟ್‌ಗಳನ್ನು ಮೀಸಲಿರಿಸಲು ಕ್ರಮ ವಹಿಸುವಂತೆ ಉಳ್ಳಾಲದ ಹಸನಬ್ಬ ಡಿಸಿಪಿ ಅವರಲ್ಲಿ ಮನವಿ ಮಾಡಿದರು.
ಮನವಿಗೆ ಸ್ಪಂದಿಸಿದ ಡಿಸಿಪಿ, ನರ್ಮ್ಸ್ ಬಸ್‌ನಲ್ಲಿ ಮಹಿಳೆಯರಿಗೆ ಮೀಸಲು ಸೀಟ್‌ಗಳ ಬಗ್ಗೆ ಆರ್‌ಟಿಒ ಅಧಿಕಾರಿಗಳಿಗೆ ಮಾಹಿತಿ ನೀಡಲಾಗುವುದು. ಖಾಸಗಿ ಬಸ್‌ಗಳಲ್ಲಿಯೂ ಹಿರಿಯ ನಾಗರಿಕರಿಗಾಗಿ ಹೆಚ್ಚುವರಿಯಾಗಿ ಮತ್ತೊಂದು ಸೀಟ್‌ನ ಮೀಸಲು ಕುರಿತು ಚರ್ಚೆ ನಡೆಸಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಕೈಕಂಬ ಪೊಂಪೈ ಶಾಲೆಗೆ ತನ್ನ ಮಗು ಹೋಗುತ್ತಿದ್ದು, ಶಾಲೆ ಬಸ್‌ನಲ್ಲಿ ಮನೆಯ ಎದುರು ಇಳಿಸಿ ರಸ್ತೆ ದಾಟಿಸದೆ ನೇರವಾಗಿ ಹೋಗುತ್ತಿದ್ದಾರೆ ಎಂದು ಸ್ಥಳೀಯ ಹಕೀಂ ದೂರಿದರು. ಇದಕ್ಕೆ ಉತ್ತರಿಸಿದ ಡಿಸಿಪಿ, ಮನೆ ಎದುರು ಶಾಲಾ ವಾಹನ ಬಂದಾಗ ಮನೆಯವರೇ ಹೋಗಿ ಮಕ್ಕಳ ಕರೆ ತರಬಹುದು. ರಸ್ತೆ ಸಂಚಾರದ ವೇಳೆ ಎಚ್ಚರ ವಹಿಸಲು ಮಕ್ಕಳಿಗೆ ಮಾರ್ಗದರ್ಶನ ನೀಡಬೇಕು. ಮಕ್ಕಳ ಸುರಕ್ಷತೆ ಪೋಷಕರ ಕರ್ತವ್ಯವಾಗಿದೆ ಎಂದರು.
ನಗರದ ಸೈಂಟ್ ಆ್ಯನ್ಸ್ ಮತ್ತು ಆಗ್ನೈಸ್ ಶಾಲಾ-ಕಾಲೇಜಿನ ವಿದ್ಯಾರ್ಥಿಗಳು ಶಾಲೆ ಪ್ರಾರಂಭವಾಗುವ ವೇಳೆ ಹಾಗೂ ಶಾಲೆ ಬಿಡುವ ವೇಳೆ ಹೆಲ್ಮೆಟ್ ಧರಿಸದೇ ಬೈಕ್‌ಗಳನ್ನು ಅತಿವೇಗದಲ್ಲಿ ಚಲಾಯಿಸಿಕೊಂಡು ಹೋಗುತ್ತಿದ್ದಾರೆ. ಈ ಬಗ್ಗೆ ಕ್ರಮ ಕೈಗೊಳ್ಳಲು ಒತ್ತಾಯಿಸಿದರು.
ಈ ವೇಳೆ ಪ್ರತಿಕ್ರಿಯಿಸಿದ ಡಿಸಿಪಿ ಹನುಮಂತರಾಯ, ಹೆಲ್ಮೆಟ್ ಧರಿಸದೇ ಬೈಕ್ ಚಲಾಯಿಸುವ ವಿದ್ಯಾರ್ಥಿಗಳ ವಿರುದ್ಧ ಕ್ರಮ ಕೈಗೊಳ್ಳಲು ಸಂಚಾರ ಪೊಲೀಸರಿಗೆ ಸೂಚಿಸಿದರು. ಕಾಟಿಪಳ್ಳ ಕೈಕಂಬದ ಬಳಿ ಇರುವ ತನ್ನ ಮನೆಯ ಪಕ್ಕದ ಮನೆಯವರು ಸೇಫ್ಟಿ ಟ್ಯಾಂಕ್ ಓವರ್ ಫ್ಲೋ ಆಗಿ ನೀರು ತನ್ನ ಮನೆಯ ಕಂಪೌಂಡ್ ಒಳಗೆ ಹರಿಯುತ್ತಿದೆ. ಈ ಕುರಿತು ಕ್ರಮ ಕೈಗೊಳ್ಳಲು ದೂರಿದರು.
ಇದಕ್ಕೆ ಉತ್ತರಿಸಿದ ಡಿಸಿಪಿ, ಮಹಾನಗರ ಪಾಲಿಕೆಯ ಆಯುಕ್ತರಿಗೆ ಮಾಹಿತಿಯನ್ನು ನೀಡಿದರೆ ಅವರು ಕ್ರಮ ಕೈಗೊಳ್ಳಲಿದ್ದಾರೆ. ಈಗಾಗಲೇ ಅಧಿಕಾರಿಗಳಿಗೆ ದೂರುಗಳನ್ನು ಸಲ್ಲಿಸಿದ್ದಲ್ಲಿ ಅದರ ಪ್ರತಿಗಳನ್ನು ಆಯುಕ್ತರ ಗಮನಕ್ಕೆ ತರಬೇಕು ಎಂದು ತಿಳಿಸಿದರು.
ಬಳ್ಳಾಲ್‌ಭಾಗ್‌ನಲ್ಲಿ ಹೆಚ್ಚು ಬಡ್ಡಿ ದರ ವಿಧಿಸುತ್ತಿದ್ದು, ಇದರಿಂದಾಗುವ ತೊಂದರೆ ಕುರಿತು ದೂರು, ಕೊಟ್ಟಾರಚೌಕಿಯಲ್ಲಿ ನೋ ಪಾರ್ಕಿಂಗ್ ಬೋರ್ಡ್‌ಗಳು ನಾಪತ್ತೆಯಾಗಿರುವ ಬಗ್ಗೆ, ಬಸ್‌ಗಳಲ್ಲಿ ಟಿಕೆಟ್ ನೀಡದಿರುವ ಕುರಿತು, ಹ್ಯಾಟ್‌ಹಿಲ್ ಬಳಿ ಮನೆಯೊಂದೆ ಹಿಂಭಾಗ ಕಸ ಹಾಕಿರುವುದನ್ನು ಪಾಲಿಕೆಯಿಂದ ತೆಗೆಯದೆ ಇರುವುದು, ಮೂಡುಬಿದಿರೆಯ ಮಸೀದಿ ಬಳಿ ವಾಹನಗಳ ಪಾರ್ಕಿಂಗ್ ಸಮಸ್ಯೆ ಮತ್ತಿತರ ಸಮಸ್ಯೆ ಕುರಿತು 19 ದೂರುಗಳು ಬಂದವು.
ಈ ಸಂದರ್ಭದಲ್ಲಿ ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ಉಮಾ ಪ್ರಶಾಂತ್, ಸಂಚಾರ ವಿಭಾಗದ ಎಸಿಪಿ ಮಂಜುನಾಥ್ ಶೆಟ್ಟಿ, ಪೊಲೀಸ್ ಅಧಿಕಾರಿಗಳಾದ ಅಮಾನುಲ್ಲಾ ಎ., ಕುಮಾರಸ್ವಾಮಿ, ನಾಗೇಶ್ ಬಂಗೇರ ಹಾಗೂ ಮೋಹನ್ ಕೊಟ್ಟಾರಿ ಮತ್ತಿತರರಿ ಇದ್ದರು.







