ಜು.16ರಿಂದ ಮನಪಾ ವ್ಯಾಪ್ತಿಯಲ್ಲಿ ಇಂಧ್ರಧನುಷ್ ಲಸಿಕಾ ಅಭಿಯಾನ
ಮಂಗಳೂರು, ಜು.13: ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ 60 ವಾರ್ಡ್‌ಗಳಲ್ಲಿ ‘ಇಂದ್ರಧನುಷ್-ನಗರ ಲಸಿಕಾ ಅಭಿಯಾನ’ವು ಜು.16,17,18,20 ಮತ್ತು ಆ.13,14,17,18 ಹಾಗೂ ಸೆ.10,11,14,15ರಂದು ನಡೆಯಲಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿ ಕಾರಿ ಡಾ. ರಾಮಕೃಷ್ಣ ರಾವ್ ತಿಳಿಸಿದ್ದಾರೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕಚೇರಿ ಶುಕ್ರವಾರ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಸುಮಾರು 318 ಗರ್ಭಿಣಿಯರು, 815 ಮಂದಿ 2 ವರ್ಷದೊಳಗಿನ ಮಕ್ಕಳು ಹಾಗೂ 22 ಮಂದಿ 5ರಿಂದ 6 ವರ್ಷದೊಳಗಿನ ಮಕ್ಕಳಿಗೆ ಲಸಿಕೆ ಹಾಕಲಾಗುತ್ತಿದೆ. ಹೊರ ಜಿಲ್ಲೆಯವರು ಲಸಿಕಾ ಕೇಂದ್ರಕ್ಕೆ ಬಂದರೆ ಅವರಿಗೂ ಲಸಿಕೆ ಹಾಕಿಸುವ ವ್ಯವಸ್ಥೆ ಕಲ್ಪಿಸಲಾಗುವುದು ಎಂದರು.
ಈ ಹಿಂದೆ ಲಸಿಕೆ/ಚುಚ್ಚುಮದ್ದು ಪಡೆಯಲು ಬಾಕಿ ಇರುವ ಮತ್ತು ಪ್ರಸ್ತುತ ಲಸಿಕೆ ಪಡೆಯಬೇಕಾದ ಗರ್ಭಿಣಿಯರು, ಈ ಹಿಂದೆ ಲಸಿಕೆ/ಚುಚ್ಚುಮದ್ದು ಪಡೆಯಲು ಬಾಕಿ ಇರುವ ಮತ್ತು ಪ್ರಸ್ತುತ ಲಸಿಕೆ/ಚುಚ್ಚುಮದ್ದು ಪಡೆಯಬೇಕಾಗಿರುವ ಎರಡು ವರ್ಷದೊಳಗಿನ ಮಕ್ಕಳು, ಈ ಹಿಂದೆ ಲಸಿಕೆ/ಚುಚ್ಚುಮದ್ದು ಪಡೆಯಲು ಬಾಕಿ ಇರುವ ಮತ್ತು ಪ್ರಸ್ತುತ ಲಸಿಕೆ ಪಡೆಯಬೇಕಾಗಿರುವ 5ರಿಂದ 6 ವರ್ಷದ ಶಾಲೆ ಬಿಟ್ಟ ಮಕ್ಕಳು ತಪ್ಪದೇ ಲಸಿಕೆ ಹಾಕಿಸಿಕೊಳ್ಳಬೇಕು. ಈ ಅಭಿಯಾನದಡಿ ಗರ್ಭಿಣಿಯರಿಗೆ ಟಿಟಿ ಲಸಿಕೆ, ಎರಡು ವರ್ಷದೊಳಗಿನ ಮಕ್ಕಳಿಗೆ ಬಿಸಿಜಿ, ಪೋಲಿಯೋ, ದಡಾರ ಮತ್ತು ರುಬೆಲ್ಲಾ ಪ್ರತ್ಯೇಕ ಲಸಿಕೆ ಹಾಗೂ ಡಿಪಿಟಿ ಮುಂತಾದವು ಮತ್ತು 5-6 ವರ್ಷದೊಳಗಿನ ಮಕ್ಕಳಿಗೆ ಡಿಪಿಟಿ ಬೂಸ್ಟರ್‌ನ್ನು ಹಾಕಲಾಗುವುದು ಎಂದು ಡಾ.ರಾಮಕೃಷ್ಣ ರಾವ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ. ಅಶೋಕ್, ಜಿಲ್ಲಾ ಸರ್ವೇಕ್ಷಣಾ ಅಧಿಕಾರಿ ಡಾ. ರಾಜೇಶ್, ಡಾ. ಸಿಕಂದರ್ ಪಾಶಾ ಮತ್ತಿತರರು ಉಪಸ್ಥಿತರಿದ್ದರು.
ಲಸಿಕೆ ಹಾಕುವ ಕೇಂದ್ರಗಳ ವಿವರ
ಜು.16ರಂದು ಬೆಳಗ್ಗೆ 10 ಗಂಟೆಗೆ ಜೆಪ್ಪು ನಗರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಅಭಿಯಾನ ಉದ್ಘಾಟನೆಗೊಳ್ಳಲಿದೆ. ಜೆಪ್ಪು, ಪಡೀಲ್ (ಮರೋಳಿ), ಶಕ್ತಿನಗರ, ಬಂದರು, ಕಸಬಾ ಬೆಂಗ್ರೆ, ಕುಳಾಯಿ (ಹೊನ್ನಕಟ್ಟೆ), ಸುರತ್ಕಲ್, ಎಕ್ಕೂರು, ಕೂಳೂರು-ಕುಂಜತ್ತಬೈಲ್, ಲೇಡಿಹಿಲ್‌ಗಳಲ್ಲಿ ಉಚಿತವಾಗಿ ಲಸಿಕೆ/ ಚುಚ್ಚುಮದ್ದು ದೊರೆಯಲಿದೆ. ಇದಲ್ಲದೆ 83 ಲಸಿಕಾ ಬೂತ್‌ಗಳಲ್ಲಿಯೂ ಲಸಿಕೆ ಹಾಕಲಾಗುವುದು.ಗರ್ಭಿಣಿಯರು ಮತ್ತು ನಿರ್ಧರಿತ ವಯೋಮಾನದ ಮಕ್ಕಳು ಸಂಪೂರ್ಣವಾಗಿ ಲಸಿಕೆ ಪಡೆದಿದ್ದಾರೆಯೇ ಎಂದು ಸಮೀಪದ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ಅಥವಾ ಕ್ಷೇತ್ರದ ಆರೋಗ್ಯ ಕಾರ್ಯಕರ್ತೆ, ಆಶಾ ಕಾರ್ಯಕರ್ತೆ ಅಥವಾ ಅಂಗನವಾಡಿ ಕಾರ್ಯಕರ್ತೆಯರಲ್ಲಿ ಖಾತರಿಪಡಿಸಿಕೊಳ್ಳಬೇಕು. ಬಾಕಿ ಇದ್ದಲ್ಲಿ ಲಸಿಕೆ ಹಾಕಿಸಲು ಕ್ರಮ ಜರಗಿಸಲು ಸೂಚಿಸಲಾಗಿದೆ ಎಂದು ಡಾ. ರಾಮಕೃಷ್ಣ ರಾವ್ ತಿಳಿಸಿದರು.







