ನ. 23ರಿಂದ ದುಬೈಯಲ್ಲಿ ವಿಶ್ವ ತುಳು ಸಮ್ಮೇಳನ
ಮಂಗಳೂರು, ಜು.13: ಅರಬ್ ಸಂಯುಕ್ತ ಸಂಸ್ಥಾನದಲ್ಲಿ ಪ್ರಥಮ ಬಾರಿಗೆ ದುಬೈಯ ಅಲ್ ನಾಸರ್ ಲೀಸರ್ ಲ್ಯಾಂಡ್‌ಐಸ್‌ರಿಂಕ್ ಒಳಾಂಗಣ ಕ್ರೀಡಾಂಗಣದಲ್ಲಿ ನ.23, 24ರಂದು ವಿಶ್ವ ತುಳು ಸಮ್ಮೇಳನ ನಡೆಯಲಿದೆ.
ಆ ಹಿನ್ನೆಲೆಯಲ್ಲಿ ವಿಶ್ವ ತುಳು ಸಮ್ಮೇಳನದ ಸಲಹಾ ಸಮಿತಿಯ ಪೂರ್ವಭಾವಿ ಸಭೆಯು ಇತ್ತೀಚೆಗೆ ದುಬೈಯ ಬುರ್ಜು ಖಲಿಫಾ ರೆಸಿಡೆನಸ್ಸಿಸ್ ಮಲ್ಟಿಫಂಕ್ಷನ್ ಹಾಲ್‌ನಲ್ಲಿ ಸಾಗರೋತ್ತರ ತುಳುವರ ಮುಖ್ಯ ಸಂಘಟಕ ಸರ್ವೋತ್ತಮ ಶೆಟ್ಟಿಯ ಅಧ್ಯಕ್ಷತೆಯಲ್ಲಿ ನಡೆಯಿತು.
ಸಭೆಯಲ್ಲಿ ಬಿ.ಕೆ.ಗಣೇಶ್ ರೈ, ಶೋಧನ್ ಪ್ರಸಾದ್, ದೇವ್‌ಕುಮಾರ್ ಕಾಂಬ್ಲಿ, ಆಲ್ವಿನ್ ಪಿಂಟೊ, ಅಜ್ಮಲ್, ಸತೀಶ್ ಪೂಜಾರಿ, ಯೋಗೇಶ್ ಪ್ರಭು, ಸುವರ್ಣ ಸತೀಶ್, ಜ್ಯೋತಿಕಾ ಹರ್ಷ ಶೆಟ್ಟಿ, ಸ್ಮಿತಾ ಪ್ರಸನ್ನ, ಶಶಿ ರವಿರಾಜ್ ಶೆಟ್ಟಿ ಭಾಗವಸಿದ್ದರು.
ಕೊಲ್ಲಿ ತುಳುವರು, ಅಖಿಲ ಭಾರತ ತುಳು ಒಕ್ಕೂಟ, ಕರ್ನಾಟಕ ತುಳು ಸಾಹಿತ್ಯ ಅಕಾಡಮಿ, ಸಾಗರೋತ್ತರ ತುಳುವರು ಈ ಸಂಘಟನೆಗಳ ಸಹಯೋಗ ದೊಂದಿಗೆ ಆಯೋಜಿಸಲಾಗುವ ವಿಶ್ವ ತುಳು ಸಮ್ಮೇಳನದಲ್ಲಿ ಮುಖ್ಯ ಅತಿಥಿಗಳಾಗಿ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ಮತ್ತಿತರರು ಪಾಲ್ಗೊಳ್ಳಲಿದ್ದಾರೆ.
ಸಮ್ಮೇಳನದ ಪ್ರಯುಕ್ತ ನಡೆಯುವ ತುಳು ಜಾನಪದ ನೃತ್ಯ ಸ್ಪರ್ಧೆಯಲ್ಲಿ ಮಸ್ಕತ್, ಬಹರೈನ್, ಕತರ್, ಕುವೈತ್, ಸೌದಿ ಅರೇಬಿಯಾ, ಒಮಾನ್, ಯು.ಎ.ಇ.ಯ ಹಲವು ಜಾನಪದ ತಂಡಗಳು ಭಾಗವಹಿಸಲಿದೆ. ಐತಿಹಾಸಿಕ ದಾಖಲೆಯಾಗಲಿರುವ ಈ ಸಮ್ಮೇಳನದ ವಿಶೇಷ ಸ್ಮರಣ ಸಂಚಿಕೆಯೂ ಬಿಡುಗಡೆಗೊಳ್ಳಲಿದೆ.
ತಾಳ ಮದ್ದಳೆ, ಯಕ್ಷಗಾನ ನಾಟ್ಯ ವೈಭವ, ತುಳು ರಸ ಮಂಜರಿ, ತುಳು ಸಾಹಿತ್ಯ ಗೋಷ್ಠಿ, ದೈವಾರಾಧನೆ ಮತ್ತು ಭೂತಾರಾಧನೆ, ತುಳು ಮಾಧ್ಯಮ ಗೋಷ್ಠಿ, ತುಳು ಹಾಸ್ಯ ಸಂಜೆ, ತುಳು ಕವನ ವಾಚನ, ತುಳು ಚುಟುಕು ಗೋಷ್ಠಿ, ತುಳು ರಂಗ ಭೂಮಿ ಮತ್ತು ಚಲನಚಿತ್ರ ಗೋಷ್ಠಿ ಮತ್ತು ಅನಿವಾಸಿ ಗೋಷ್ಠಿಗಳಲ್ಲಿ ತುಳುನಾಡಿನಿಂದ ಹಲವಾರು ಸಾಹಿತಿಗಳು, ವಿದ್ವಾಂಸರು ಕಲಾವಿದರು ಭಾಗವಹಿಸಲಿದ್ದಾರೆ ಎಂದು ಸರ್ವೋತ್ತಮ ಶೆಟ್ಟಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.







