ಬಂಟ್ವಾಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ: ಅಧ್ಯಕ್ಷರಾಗಿ ಹರೀಶ ಮಾಂಬಾಡಿ

ಹರೀಶ ಮಾಂಬಾಡಿ - ಮುಹಮ್ಮದ್ ಅಲಿ
ಬಂಟ್ವಾಳ, ಜು. 13: ಇಲ್ಲಿನ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಅಧ್ಯಕ್ಷರಾಗಿ ಹರೀಶ ಮಾಂಬಾಡಿ ಸರ್ವಾನುಮತದಿಂದ ಆಯ್ಕೆಯಾದರು.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ್ ನಾಯಕ್ ಇಂದಾಜೆ ಅಧ್ಯಕ್ಷತೆಯಲ್ಲಿ ಶುಕ್ರವಾರ ಬಿ.ಸಿ.ರೋಡಿನ ಪ್ರೆಸ್ಕ್ಲಬ್ನಲ್ಲಿ ನಡೆದ ಮಹಾಸಭೆಯಲ್ಲಿ ಈ ಆಯ್ಕೆ ನಡೆಯಿತು.
ಉಪಾಧ್ಯಕ್ಷರಾಗಿ ರಮೇಶ್ ಕೆ.ಪುಣಚ, ಕಾರ್ಯದರ್ಶಿಯಾಗಿ ಮುಹಮ್ಮದ್ ಅಲಿ ವಿಟ್ಲ, ಜೊತೆ ಕಾರ್ಯದರ್ಶಿಯಾಗಿ ಅಬ್ದುಲ್ ರಹಿಮಾನ್ ತಲಪಾಡಿ, ಕೋಶಾಧಿಕಾರಿಯಾಗಿ ಯಾದವ ಕುಲಾಲ್ ಅಗ್ರಬೈಲು ಅವರನ್ನು ಆಯ್ಕೆಗೊಳಿಸಲಾಯಿತು.
ವಾರ್ಷಿಕ ವರದಿ ಹಾಗೂ ಲೆಕ್ಕಪತ್ರ ಮಂಡನೆಯ ಬಳಿಕ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ಈ ಸಂದರ್ಭ ನಿರ್ಗಮನ ಅಧ್ಯಕ್ಷ ಮೌನೇಶ್ ವಿಶ್ವಕರ್ಮ ಮಾತನಾಡಿ, ಎಲ್ಲ ಸದಸ್ಯರ ಸಹಕಾರದಿಂದಾಗಿ ಕಳೆದ ವರ್ಷ ಬಂಟ್ವಾಳ ತಾಲೂಕು ಪತ್ರಕರ್ತರ ಸಂಘದ ರಜತ ವರ್ಷಾಚರಣೆಯನ್ನು ಯಶಸ್ವಿಯಾಗಿ ಆಚರಿಸಲಾಗಿದೆ. ಮುಂದಿನ ದಿನಗಳಲ್ಲಿ ಹೊಸ ತಂಡಕ್ಕೆ ಎಲ್ಲರೂ ಸಹಕಾರ ನೀಡುವ ಮೂಲಕ ಹೊಂದಾಣಿಕೆಯೊಂದಿಗೆ ಸಂಘವನ್ನು ಮುನ್ನಡೆಸಬೇಕಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ್ ನಾಯಕ್ ಮಾತನಾಡಿ, ಬಂಟ್ವಾಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಹಲವಾರು ಸಮಾಜಮುಖಿ ಕಾರ್ಯಕ್ರಮಗಳನ್ನು ನಡೆಸುವ ಮೂಲಕ ಗುರುತಿಸಿಕೊಂಡಿದೆ ಎಂದರು.
ನೂತನ ಅಧ್ಯಕ್ಷ ಹರೀಶ್ ಮಾಂಬಾಡಿ ಮಾತನಾಡಿದರು. ಪ್ರೆಸ್ಕ್ಲಬ್ ಅಧ್ಯಕ್ಷ ಪ್ರಶಾಂತ್ ಪುಂಜಲ್ಕಟ್ಟೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯದರ್ಶಿ ಮುಹಮ್ಮದ್ ಅಲಿ ವಿಟ್ಲ ವಂದಿಸಿದರು.







