ಕಳಪೆ ಕಾಮಗಾರಿ: ಪ್ರಾಧಿಕಾರದ ಅಧಿಕಾರಿ, ನವಯುಗ ವಿರುದ್ಧ ಪ್ರಕರಣ ದಾಖಲು
ಕಾಪು, ಜು.13: ರಾಷ್ಟ್ರೀಯ ಹೆದ್ದಾರಿ 66ರ ಅಸಮರ್ಪಕ, ಅವೈಜ್ಞಾನಿಕ ಹಾಗೂ ಕಳಪೆ ಕಾಮಗಾರಿ ನಿರ್ವಹಿಸಿದ ಗುತ್ತಿಗೆ ಕಂಪೆನಿ ನವಯುಗ ಹಾಗೂ ಮಂಗಳೂರು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕರ ವಿರುದ್ಧ ಕಾಪು ತಹಶೀಲ್ದಾರ್ ನೀಡಿದ ದೂರಿನಂತೆ ಕಾಪು ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.
ಎರಡು ವರ್ಷಗಳ ಹಿಂದೆಯಷ್ಟೇ ರಾಷ್ಟ್ರೀಯ ಹೆದ್ದಾರಿ 66 ನಿರ್ಮಾಣ ವಾಗಿದ್ದು, ಹೆದ್ದಾರಿಯ ಕಾಮಗಾರಿ ವೇಳೆ ಅವೈಜ್ಞಾನಿಕ ಹಾಗೂ ಕಲ್ಲು ಮಣ್ಣು ಸರಿಯಾಗಿ ತುಂಬಿಸದೆ ಕಳಪೆ ಕಾಮಗಾರಿ ಮಾಡಿದ್ದರಿಂದ ವಾಹನಗಳು ಸಂಚಾರ ಸಮಸ್ಯೆ ಎದುರಿಸುತ್ತಿದೆ. ಅಲ್ಲದೆ ಹಲವಾರು ಅಪಘಾತ ಹಾಗೂ ಸಾವು ನೋವು ಸಂಭವಿಸುತ್ತಿವೆ ಎಂದು ದೂರಲಾಗಿದೆ.
ಈ ಬಗ್ಗೆ ಸಭೆಗಳನ್ನು ನಡೆಸಿ ರಾಷ್ಟ್ರೀಯ ಹೆದ್ದಾರಿ 66 ಅಧಿಕಾರಿಗಳಿಗೆ ಮತ್ತು ಕಾಮಗಾರಿ ನಡೆಸಿದ ನವಯುಗ ಕಂಪನಿಯವರಿಗೆ ನಿರ್ದೇಶನಗಳನ್ನು ನೀಡಲಾ ಗಿತ್ತು. ಆದರೂ ಕಾಮಗಾರಿ ನಿರ್ವಹಣೆಯಲ್ಲಿ ವಿಳಂಬ ಧೋರಣೆ ತೋರಿ ಅಸಮರ್ಪಕ ಕಾಮಗಾರಿ ಮತ್ತು ಕಾಮಗಾರಿ ನಿರ್ವಹಣೆಯಲ್ಲಿ ನಿರ್ಲಕ್ಷ ವಹಿಸಲಾಗಿತ್ತು. ಇದರ ಪರಿಣಾಮ ಜು.10ರಂದು ಕಾಪು ಸಮೀಪದ ಮೂಳೂರು ಗ್ರಾಮದ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಬೃಹತ ಹೊಂಡ ಆಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಈ ಹಿನ್ನೆಲೆಯಲ್ಲಿ ಅಸಮರ್ಪಕ, ಅವೈಜ್ಞಾನಿಕ ಹಾಗೂ ಕಳಪೆ ಕಾಮಗಾರಿ ಮಾಡಿ ಸಾರ್ವಜನಿಕ ಹಣದ ದುರುಪಯೋಗ ಮಾಡಿರುವ ನವಯುಗ ಕಂಪನಿ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕರ ವಿರುದ್ಧ ಕಾಪು ತಹಶೀಲ್ದಾರ್ ಗುರುಸಿದ್ದಯ್ಯ ನೀಡಿದ ದೂರಿನಂತೆ ಕಲಂ 136/2018 ಕಲಂ:283, 336, 420 ಐಪಿಸಿ ಮತ್ತು 8ಬಿ ಎನ್.ಎಚ್.ಆಕ್ಟೃ್ನಡಿ ಪ್ರಕರಣ ದಾಖಲಾಗಿದೆ.







