ಡೈಮಂಡ್ ಬೇಸ್‌ನಲ್ಲಿ 2,000 ಕೋಟಿ ರೂ. ಹಣ ವಂಚನೆಯನ್ನು ಬಯಲುಗೊಳಿಸಿದ ಡಿಆರ್‌ಐ
ಮುಂಬೈ, ಜು.13: ಇಲ್ಲಿನ ಭಾರತ್ ಡೈಮಂಡ್ ಬೇಸ್‌ನಲ್ಲಿ (ಡಿಬಿಡಿ) ನಡೆದಿರುವ 2,000 ಕೋಟಿ ರೂ. ಮೊತ್ತದ ಹಣ ವಂಚನೆಯನ್ನು ಆದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ) ಬಯಲುಗೊಳಿಸಿದ್ದು ನಾಲ್ಕು ಮಂದಿಯನ್ನು ಬಂಧಿಸಿದೆ.
ಖಚಿತ ಮಾಹಿತಿಯ ಮೇರೆಗೆ ಬಾಂಡ್ರ ಕುರ್ಲಾ ಸಂಕೀರ್ಣದಲ್ಲಿರುವ ಡಿಬಿಡಿ ಮೇಲೆ ದಾಳಿ ನಡೆಸಿದ್ದ ಡಿಆರ್‌ಐ ಅಧಿಕಾರಿಗಳು 156 ಕೋಟಿ ರೂ. ಮೌಲ್ಯದ್ದೆಂದು ಘೋಷಿಸಲಾಗಿದ್ದ ಕಳಪೆ ಗುಣಮಟ್ಟದ ವಜ್ರಗಳನ್ನು ತಡೆಹಿಡಿದಿದ್ದರು. ಈ ವಜ್ರಗಳ ಮರುಮೌಲ್ಯಮಾಪನ ಮಾಡಿದಾಗ ಇವುಗಳ ಮೌಲ್ಯ ಕೇವಲ 1.2 ಕೋಟಿ ರೂ. ಆಗಿದೆ ಎಂದು ತಿಳಿದುಬಂದಿತ್ತು. ಈ ಬಗ್ಗೆ ತನಿಖೆ ನಡೆಸಿದಾಗ, ಈ ಕಚ್ಚಾ ವಜ್ರಗಳನ್ನು ಹಾಂಗ್ ಕಾಂಗ್ ಮತ್ತು ದುಬೈಯಂಥ ಸಾಗರೋತ್ತರ ಮಾರುಕಟ್ಟೆಗಳಿಂದ ಆಮದು ಮಾಡಿಕೊಳ್ಳಲಾಗಿತ್ತು. ಇದಕ್ಕೆ ರಫ್ತುದಾರರ ನೆರವೂ ಇತ್ತು ಮತ್ತು ಈ ವ್ರಜಗಳನ್ನು ಅತೀಹೆಚ್ಚು ಬೆಲೆ ನೀಡಿ ಖರೀದಿಸಿರುವುದಾಗಿ ಬಿಂಬಿಸಲಾಗಿತ್ತು ಎಂಬುದು ಬಯಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಬಂಧಿಸಲಾಗಿದೆ. ಜೊತೆಗೆ 10 ಲಕ್ಷ ರೂ. ನಗದು, 2.2 ಕೋಟಿ ರೂ. ಮೊತ್ತದ ಡಿಮಾಂಡ್ ಡ್ರಾಫ್ಟ್, ಚೆಕ್ ಬುಕ್‌ಗಳು, ಆಧಾರ್ ಕಾರ್ಡ್‌ಗಳು ಮತ್ತು ಪಾನ್ ಕಾರ್ಡ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ವಂಚನಾ ಜಾಲದ ಬಗ್ಗೆ ಆಘಾತ ವ್ಯಕ್ತಪಡಿಸಿರುವ ಡಿಬಿಡಿ ಉಪಾಧ್ಯಕ್ಷ ಮೆಹುಲ್ ಶಾ, ಸದ್ಯ ಬಂಧಿತರಾಗಿರುವ ವೌಲ್ಯಮಾಪಕರ ಬಗ್ಗೆ ವಜ್ರದ ವ್ಯವಹಾರ ನಡೆಸುವ ಯಾರಿಗೂ ತಿಳಿದಿಲ್ಲ. ಅವರು ಹೇಗೆ ವಜ್ರಗಳ ವೌಲ್ಯಮಾಪನ ಮಾಡುತ್ತಿದ್ದರು ಎಂಬುದೇ ಆಶ್ಚರ್ಯ. ನಮ್ಮ ಉದ್ದಿಮೆಯು ತುಂಬಾ ಸಣ್ಣ ಗಾತ್ರದ್ದಾಗಿದ್ದು ಪ್ರತಿಯೊಬ್ಬರು ಪರಸ್ಪರ ಪರಿಚಿತರಾಗಿದ್ದಾರೆ ಎಂದು ತಿಳಿಸಿದ್ದಾರೆ.
ಇಂಥ ಘಟನೆಗಳನ್ನು ತಡೆಯಲು ಮೌಲ್ಯಮಾಪಕರಿಗೆ ಅನುಮತಿಯನ್ನು ನೀಡುವ ಅಧಿಕಾರ ಕೇವಲ ತನಗೆ ಮಾತ್ರ ಇರುವಂತೆ ಮಾಡಬೇಕೆಂದು ರತ್ನಗಳು ಮತ್ತು ಆಭರಣ ರಫ್ತು ಪ್ರೋತ್ಸಾಹ ಮಂಡಳಿ (ಜಿೆಇಪಿಸಿ) ಸರಕಾರಕ್ಕೆ ಮನವಿ ಮಾಡಿದೆ.
ಕಳೆದ ಮೂರು ತಿಂಗಳಿಂದ ಜಿಜೆಇಪಿಸಿ, ಸರಕಾರ ಮತ್ತು ಡಿಆರ್‌ಐ ಜೊತೆಯಾಗಿ ಕೆಲಸ ಮಾಡುತ್ತಿದ್ದು ಇದರ ಫಲವಾಗಿ ಇಷ್ಟೊಂದು ದೊಡ್ಡ ಪ್ರಮಾಣದ ವಂನೆ ಬಯಲಾಗಿದೆ ಎಂದು ಶಾ ತಿಳಿಸಿದ್ದಾರೆ.





