ಮೂಡಿಗೆರೆ: ಅತ್ಯಾಚಾರಿಗಳಿಗೆ ಗಲ್ಲುಶಿಕ್ಷೆ ಜಾರಿಗೆ ಆಗ್ರಹಿಸಿ ಧರಣಿ

ಮೂಡಿಗೆರೆ,ಜು.13: ದೇಶದಲ್ಲಿ ಅತ್ಯಾಚಾರ ಎಸಗುವ ಅಪರಾಧಿಗಳಿಗೆ ಗಲ್ಲು ಶಿಕ್ಷೆ ಜಾರಿಗೊಳಿಸಬೇಕೆಂದು ಆಗ್ರಹಿಸಿ ಶುಕ್ರವಾರ ಪೀಸ್ ಆಂಡ್ ಅವೇರ್‍ನೆಸ್ ಟ್ರಸ್ಟ್ ನೇತೃತ್ವದಲ್ಲಿ ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಯಿತು.
ಈ ವೇಳೆ ಟ್ರಸ್ಟ್ ನ ಸಂಸ್ಥಾಪಕ ಅಲ್ತಾಫ್ ಬಿಳಗುಳ ಮಾತನಾಡಿ, ದೇಶಾದ್ಯಂತ ನಡೆಯುತ್ತಿರುವ ಅತ್ಯಾಚಾರ ಪ್ರಕರಣದಿಂದ ಮಹಿಳೆಯರು, ಮಕ್ಕಳು ನಿರ್ಭಿತಿಯಿಂದ ನಡೆಯಲು ಕಷ್ಟವಾಗಿದೆ. ಯಾವ ಸಂದರ್ಭದಲ್ಲಿ ತಮ್ಮ ಮಕ್ಕಳ ಮೇಲೆ ಕಾಮುಕರಿಂದ ಅತ್ಯಾಚಾರಗಳು ನಡೆಯುತ್ತದೇಯೋ ಎಂಬ ಆತಂಕದಲ್ಲಿರುವ ಹೆಣ್ಣುಮಕ್ಕಳನ್ನು ಶಾಲೆಗೆ ಕಳಿಸಲು ಹಿಂದೇಟು ಹಾಕುವಂತಾಗಿದೆ. ಹೀಗಾಗಿ ಅತ್ಯಾಚಾರ ಪ್ರಕರಣದಲ್ಲಿ ಭಾಗಿಯಾಗಿರುವ ಎಲ್ಲಾ ಆರೋಪಿಗಳನ್ನು ಬಂಧಿಸಬೇಕು. ಅಲ್ಲದೇ ಬಂಧಿತರಾಗಿರುವ ಆರೋಪಿಗಳನ್ನು ತ್ವರಿತವಾಗಿ ವಿಚಾರಣೆ ನಡೆಸಿ ಅಪರಾಧಿಗಳಿಗೆ ವಿಳಂಬ ಮಾಡದೆ ಗಲ್ಲು ಶಿಕ್ಷೆ ವಿಧಿಸಬೇಕು. ಗಲ್ಲು ಶಿಕ್ಷೆ ವಿಧಿಸುವುದರಿಂದ ದೇಶದೆಲ್ಲೆಡೆಯಲ್ಲಿಯೂ ನಡೆಯುತ್ತಿರುವ ಅತ್ಯಾಚಾರ ಪ್ರಕರಣಗಳನ್ನು ತಡೆಗಟ್ಟಬಹುದು ಮತ್ತು ಅತ್ಯಾಚಾರದ ಮನಸ್ಥಿತಿಯ ಇರುವ ದುರುಳರ ಮನಸ್ಸಲ್ಲಿ ಭಯ ಮೂಡಿಸಬಹುದು ಎಂದು ಅಭಿಪ್ರಾಯಪಟ್ಟರು
ಪ್ರತಿಭಟನೆಯಲ್ಲಿ ಭಾಗವಹಿಸಿದ ಕಾರ್ಯಕರ್ತರು ಅತ್ಯಾಚಾರಿಗಳ ವಿರುದ್ಧ ಘೋಷಣೆ ಕೂಗಿ ನಂತರ ತಾಲೂಕು ಕಚೇರಿ ಶಿರಸ್ತೇದಾರ್ ಸತ್ಯನಾರಾಯಣ ಅವರ ಮುಖಾಂತರ ರಾಷ್ಟ್ರಪತಿಗಳಿಗೆ, ರಾಜ್ಯಪಾಲರು, ಹಾಗೂ ಮುಖ್ಯಮಂತ್ರಿಗೆ ಮನವಿ ಪತ್ರ ರವಾನಿಸಿದರು.
ಈ ವೇಳೆ ಟ್ರಸ್ಟ್ ನ ಪದಾಧಿಕಾರಿಗಳಾದ ಆಸೀಫ್, ಗಣೇಶ, ಅಶ್ರಫ್, ಸಯ್ಯದ್, ಮುಸ್ತಫ, ಸಿದ್ದೀಕ್, ಸುದೀಪ್, ಜಿಯಾ, ಆಸೀಫ್ ಖಲಂದರಿಯಾ, ಸಫ್ವಾನ್ ಇದ್ದರು.





