ಹೊಸ ಪಡಿತರ ಚೀಟಿಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಪ್ರಾರಂಭ
ಉಡುಪಿ, ಜು.13: ಕಳೆದ ವಿಧಾನಸಭಾ ಚುನಾವಣೆ ವೇಳೆ ಸ್ಥಗಿತಗೊಳಿಸಲಾಗಿದ್ದ ಹೊಸ ಪಡಿತರ ಚೀಟಿಗೆ ಅರ್ಜಿ ಸಲ್ಲಿಸುವ ಮತ್ತು ಪಡಿತರ ಚೀಟಿ ತಿದ್ದುಪಡಿ ಮಾಡುವ ಪ್ರಕ್ರಿಯೆಗಳನ್ನು ಪುನರಾರಂಭಿಸಲಾಗಿದೆ.
ಹೊಸ ಬಿಪಿಎಲ್ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಲು ಎಲ್ಲಾ ಸದಸ್ಯರ ಆಧಾರ್ ಕಾರ್ಡ್ ಮತ್ತು ಸಂಬಂಧಿಸಿದ ಕುಟುಂಬದ ಯಾವುದಾದರೂ ಒಬ್ಬ ಸದಸ್ಯನ ಚಾಲ್ತಿಯಲ್ಲಿರುವ ಆದಾಯ ಮತ್ತು ಜಾತಿ ಪ್ರಮಾಣ ಪತ್ರ ಸಲ್ಲಿಸಬೇಕು. ಅದೇ ರೀತಿ ಕುಟುಂಬದ ಯಾವುದಾದರೂ ಒಬ್ಬ ಸದಸ್ಯನ ಮೊಬೈಲ್ ನಂಬರನ್ನು ಆಧಾರ್ ಕಾರ್ಡ್‌ಗೆ ಲಿಂಕ್ ಮಾಡಿಕೊಳ್ಳಬೇಕು.
ಎಪಿಎಲ್ ಕಾರ್ಡ್‌ಗೆ ಜಾತಿ ಮತ್ತು ಆದಾಯ ಧೃಡಪತ್ರ ಅಗತ್ಯವಿಲ್ಲ. ಆದರೆ ಉಳಿದ ಮಾನದಂಡಗಳು ಅನ್ವಯವಾಗುತ್ತವೆ. ಎಲ್ಲಾ ದಾಖಲೆಗಳೊಂದಿಗೆ ಗ್ರಾಮಾಂತರ ಪ್ರದೇಶದವರು ಗ್ರಾಪಂನಲ್ಲಿ, ನಗರ ಪ್ರದೇಶದವರು ಪ್ರಾಂಚೈಸಿ ಗಳಲ್ಲಿ ಬಿಪಿಎಲ್ ಹೊಸ ಕಾರ್ಡಿಗೆ ಅರ್ಜಿ ಸಲ್ಲಿಸಬಹುದು. 2017 ಜನವರಿ ನಂತರ ಹೊಸ ಕಾರ್ಡಿಗೆ ಅರ್ಜಿ ಸಲ್ಲಿಸಿದವರು ಪುನಃ ಅರ್ಜಿ ಸಲ್ಲಿಸುವ ಅಗತ್ಯವಿರುವುದಿಲ್ಲ.
ಚಾಲ್ತಿಯಲ್ಲಿರುವ ಬಿಪಿಎಲ್ ಕಾರ್ಡಿನಲ್ಲಿ ಹೆಸರು ಸೇರಿಸಲು ಸಂಬಂಧಿಸಿದ ಸದಸ್ಯನ ಜಾತಿ ಮತ್ತು ಆದಾಯ ಧೃಡಪತ್ರ ಹಾಗೂ ಆಧಾರ್ ಕಾರ್ಡುನ ಅಗತ್ಯವಿದೆ. ಎಪಿಎಲ್ ಕಾರ್ಡಿನಲ್ಲಿ ಹೆಸರು ಸೇರಿಸಲು ಆದಾಯ ಮತ್ತು ಜಾತಿ ಪ್ರಮಾಣ ಪತ್ರದ ಅವಶ್ಯಕತೆ ಇಲ್ಲ. ಪಡಿತರ ಚೀಟಿಯಲ್ಲಿ ಹೆಸರು ಸೇರಿಸಿದ್ದಲ್ಲಿ ಮತ್ತು ವಿಳಾಸ ಬದಲಾವಣೆ ಮಾಡಿಕೊಂಡಿದ್ದಲ್ಲಿ ಸ್ವೀಕೃತಿಯನ್ನು ತಾಲೂಕು ಕಚೇರಿ ಆಹಾರ ನಿರೀಕ್ಷಕರಿಗೆ ನೀಡಿ ಬದಲಾವಣೆ ಆದ ಕಾರ್ಡಿನ ಪ್ರತಿ ಪಡೆಯ ಬಹುದು.
ಪಡಿತರ ಚೀಟಿಯಲ್ಲಿ ಹೆಸರು ತೆಗೆದಲ್ಲಿ, ಹೆಸರು ತಿದ್ದುಪಡಿ ಮಾಡಿಕೊಂಡಲ್ಲಿ ಮತ್ತು ನ್ಯಾಯಬೆಲೆ ಅಂಗಡಿ ಬದಲಾವಣೆ ಮಾಡಿಕೊಂಡಿದ್ದಲ್ಲಿ ತಿದ್ದುಪಡಿ ಆದ ಕಾರ್ಡಿನ ಪ್ರತಿಯನ್ನು ಸಂಬಂಧಿಸಿದ ಗ್ರಾಪಂ ಅಥವಾ ಪ್ರಾಂಚೈಸಿಯಲ್ಲೇ ಪಡೆದುಕೊಳ್ಳಬಹುದು. ಈ ಕುರಿತು ಹೆಚ್ಚಿನ ಮಾಹಿತಿಗಾಗಿ ತಾಲೂಕು ಕಚೇರಿ ಆಹಾರ ನಿರೀಕ್ಷಕರು ಅಥವಾ ಉಪನಿರ್ದೇಶಕರು, ಆಹಾರ ನಾಗರಿಕಾ ಸರಬ ರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಉಡುಪಿ ಇವರನ್ನು ಸಂಪರ್ಕಿಸುವಂತೆ ಇಲಾಖೆ ಪ್ರಕಟಣೆ ತಿಳಿಸಿದೆ.







