ಪಡುಬಿದ್ರೆ : ಬ್ಲೂ ಫ್ಲಾಗ್ ಬೀಚ್ ಅಭಿವೃದ್ಧಿಗೆ ವಿರೋಧ

ಪಡುಬಿದ್ರೆ, ಜು. 13: ಪಡುಬಿದ್ರೆಯಲ್ಲಿ ಅಂತಾರಾಷ್ಟ್ರೀಯ ಬ್ಲೂಫ್ಲಾಗ್ ಮಾನ್ಯತೆಯಂತೆ ಕೇಂದ್ರ ಸರ್ಕಾರದಿಂದ ಅಭಿವೃದ್ಧಿಗೊಳಿಸಲು ಜಿಲ್ಲಾಡಳಿತ ಶುಕ್ರವಾರ ಕರೆದ ಸಭೆಯಲ್ಲಿ ಕಾಡಿಪಟ್ಟಣ ಮತ್ತು ನಡಿಪಟ್ಣ ಮೀನುಗಾರ ಸಮುದಾಯದ ಜನರು ವಿರೋಧ ವ್ಯಕ್ತ ಪಡಿಸಿದರು.
ಪ್ರವಾಸೋಧ್ಯಮ ಇಲಾಖೆಯ ಸಹಾಯಕ ನಿರ್ದೇಶಕಿ ಅನಿತಾ ಭಾಸ್ಕರ್ ಸಭೆಯಲ್ಲಿ ಮಾಹಿತಿ ನೀಡಿ, ಅಂತರಾಷ್ಟ್ರೀಯ ಮಾನ್ಯತೆ ಪಡೆದ ಬ್ಲೂ ಫ್ಲ್ಯಾಗ್ ಯೋಜನೆಗೆ ಭಾರತದಲ್ಲಿ 13 ಬೀಚ್‌ಗಳು ಹಾಗೂ ರಾಜ್ಯದಲ್ಲಿ ಪಡುಬಿದ್ರಿ ಬೀಚ್‌ನ್ನು ಆಯ್ಕೆಗೊಳಿಸಿಲಾಗಿದೆ. ಬ್ಲೂ ಫ್ಲ್ಯಾಗ್ ಯೋಜನೆಯಿಂದ ಸ್ಥಳೀಯ ಮೀನುಗಾರರಿಗೆ ಯಾವುದೇ ತೊಂದರೆಯಾಗುವುದಿಲ್ಲ. ಕೇಂದ್ರ ಸರ್ಕಾರದ ಪ್ರವಾಸೋದ್ಯಮದ ಮೂಲಕ ಬೀಚ್‌ನ್ನು ಸಮಗ್ರ ಅಭಿವೃದ್ಧಿ ಪಡಿಸಲಾಗುತ್ತದೆ.
ಹೆಜಮಾಡಿ-ಪಡುಬಿದ್ರಿ ಸಂಪರ್ಕಿಸುವ ಮುಟ್ಟವಳಿವೆ ಸಮೀಪವಿರುವ ಸುಮಾರು 1 ಎಕರೆಯ ಸರ್ಕಾರಿ ಜಮೀನಿನಲ್ಲಿ ಅಭಿವೃದ್ಧಿ ಕಾರ್ಯ ನಡೆಯಲಿದೆ. ಮೀನುಗಾರರ ಒಂದಿಂಚು ಜಾಗವನ್ನೂ ಪಡೆದುಕೊಳ್ಳುವುದಿಲ್ಲ. ಯೋಜನೆಯಿಂದ ಸ್ಥಳೀಯ ನಿವಾಸಿಗಳಿಗೆ ಪ್ರಯೋಜನವಾಗಲಿದೆ. ವ್ಯಾವಹಾರಿಕವಾಗಿಯೂ ಪ್ರದೇಶ ಅಭಿವೃದ್ಧಿಗೊಳ್ಳಲಿದೆ ಎಂದರು.
ವಿರೋಧ: ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದು, ಬೀಚ್ ಅಭಿವೃದ್ಧಿಗೊಳಿಸಿದ ಬಳಿಕ ಮೀನುಗಾರಿಕೆಗೆ ತೊಂದರೆ ನೀಡಲಾಗುತ್ತದೆ. ಈಗಾಗಲೇ ನಾವು ಯುಪಿಸಿಎಲ್‌ನಂತಹ ಯೋಜನೆಯಿಂದ ಹಲವು ಸಮಸ್ಯೆಗಳನ್ನು ಅನುಭವಿಸಿದ್ದೇವೆ. ಇನ್ನಷ್ಟು ಸಮಸ್ಯೆಯನ್ನು ಅನುಭವಿಸಲು ಸಾಧ್ಯವಿಲ್ಲ. ಹೇರಳ ಮೀನುಗಳು ದೊರಕುವ ಸ್ಥಳ ಇದಾಗಿದ್ದು, ಯಾವುದೇ ಕಾರಣಕ್ಕೂ ಬೀಚ್ ನಿರ್ಮಾಣ ಮಾಡುವುದು ಬೇಡ. ಈ ಪ್ರದೇಶದಲ್ಲಿ ಮೀನುಗಾರಿಕಾ ಬಂದರು ಮಾಡಲಿ. ಇದಕ್ಕೆ ಸರ್ಕಾರ ಮುಂದಾಗಬೇಕು ಎಂದು ಆಗ್ರಹಿಸಿದರು.
ಜಿಲ್ಲಾಧಿಕಾರಿಗೆ ವರದಿ: ಇದಕ್ಕೆ ಉತ್ತರಿಸಿದ ಅನಿತಾ ಭಾಸ್ಕರ್, ಜಿಲ್ಲಾಡಳಿತದ ಸತತ ಪರಿಶ್ರಮದಿಂದ ಪಡುಬಿದ್ರಿ ಬೀಚ್ ಯೋಜನೆಗೆ ಆಯ್ಕೆಯಾಗಿದೆ. ಜನವರಿಯಲ್ಲಿ ದೆಹಲಿಯಲ್ಲಿ ನಡೆದ ಸಭೆಯಲ್ಲಿ ಅಂತಿಮವಾಗಿದೆ. ಯೋಜನೆ ವಿರೋಧಿಸುವವರು ಲಿಖಿತವಾಗಿ ನೀಡುವಂತೆ ಹೇಳಿದ ಅವರು ಈ ಪತ್ರವನ್ನು ಜಿಲ್ಲಾಧಿಕಾರಿಗೆ ಹಾಗೂ ಸಬೆಯ ಸಂಪೂರ್ಣ ನಡವಳಿಕೆಯಲ್ಲಿ ನೀಡುವುದಾಗಿ ಹೇಳಿದರು.
ಪಡುಬಿದ್ರೆ ಗ್ರಾಮ ಪಂಚಾಯತ್ ಅಧ್ಯಕ್ಷೆ ದಮಯಂತಿ ಅಮೀನ್, ತಾಲ್ಲೂಕು ಪಂಚಾಯತ್ ಸದಸ್ಯರಾದ ನೀತಾ ಗುರುರಾಜ್, ದಿನೇಶ್ ಕೋಟ್ಯಾನ್ ಫಲಿಮಾರು, ಉಡುಪಿ ಜಿಲ್ಲಾ ಪ್ರವಾಸೋಧ್ಯಮ ಅಭಿವೃದ್ಧಿ ಸಮಿತಿಯ ಮನೋಹರ್ ಶೆಟ್ಟಿ, ಮೊಗವೀರ ಸಮುದಾಯದ ಮುಖಂಡರಾದ ಸುಕುಮಾರ್ ಶ್ರೀಯಾನ್, ಅಶೋಕ್ ಪಡುಬಿದ್ರೆ, ಸೇವಂತಿ ಸದಾಶಿವ್ ಮತ್ತಿತರರು ಉಪಸ್ಥಿತರಿದ್ದರು.







