ಅಮಾನ್ಯಗೊಂಡ 10 ಕೋ.ರೂ. ಮೊತ್ತದ ನೋಟು ಬದಲಿಸಲು ಒತ್ತಡ: ವ್ಯಕ್ತಿ ಆತ್ಮಹತ್ಯೆ

ಲಕ್ನೊ, ಜು.13: ಅಮಾನ್ಯಗೊಂಡಿರುವ 10 ಕೋಟಿ. ರೂ. ಮೊತ್ತದ ಕರೆನ್ಸಿ ನೋಟುಗಳನ್ನು ಬದಲಿಸಿ ಕೊಡುವಂತೆ ನಿವೃತ್ತ ಐಎಎಸ್ ಅಧಿಕಾರಿಯ ನಿರಂತರ ಒತ್ತಡದಿಂದ ಬೇಸತ್ತು ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ದೂರು ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸಕ್ಕರೆ ಕಾರ್ಖಾನೆಯೊಂದರ ಮಾಜಿ ಮ್ಯಾನೇಜರ್ ವಿಜಯ್ ಸಿಂಗ್(51) ವರ್ಷ ಎಂಬಾತ ಆತ್ಮಹತ್ಯೆಗೆ ಶರಣಾದ ವ್ಯಕ್ತಿ. ಈತ ಬರೆದಿರುವ ಮರಣ ಪತ್ರದಲ್ಲಿ , ತಾನು ಈ ಹಿಂದೆ ನಿವೃತ್ತ ಐಎಎಸ್ ಅಧಿಕಾರಿ ಹಾಗೂ ತನ್ನ ಬಾವ (ಸಹೋದರಿಯ ಪತಿ) ವಿನೋದ್ ಕುಮಾರ್ ಪವಾರ್‌ನ 50 ಲಕ್ಷ ರೂ. (ಅಮಾನ್ಯಗೊಂಡ ) ಕರೆನ್ಸಿ ನೋಟನ್ನು ಬದಲಾಯಿಸಲು ಸಹಕರಿಸಿದ್ದೆ.
ಆದರೆ ಪವಾರ್ ಈಗ ಮತ್ತೆ 10 ಕೋಟಿ ರೂ. ಮೊತ್ತದ ಕರೆನ್ಸಿ ನೋಟುಗಳನ್ನು ಬದಲಾಯಿಸಲು ಸಹಕರಿಸುವಂತೆ ಒತ್ತಡ ಹೇರುತ್ತಿರುವುದಲ್ಲದೆ ತನ್ನ ತಾಯಿಗೆ ಸೇರಿರುವ ಜಮೀನನ್ನು ಬಲವಂತವಾಗಿ ವಶಪಡಿಸಿಕೊಂಡಿದ್ದಾನೆ ಎಂದು ಬರೆದಿರುವುದಾಗಿ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಶಲೋಕ್ ಕುಮಾರ್ ತಿಳಿಸಿದ್ದಾರೆ. ಕೃತ್ಯಕ್ಕೆ ಬಳಸಲಾಗಿರುವ ಪಿಸ್ತೂಲನ್ನು ವಶಕ್ಕೆ ಪಡೆಯಲಾಗಿದೆ. ಡೆತ್‌ನೋಟನ್ನು ಕೈಬರಹದ ತಜ್ಞರಿಗೆ ಪರೀಕ್ಷೆಗಾಗಿ ಕಳುಹಿಸಲಾಗಿದ್ದು ಪ್ರಕರಣ ದಾಖಲಿಸಲಾಗಿದೆ ಎಂದವರು ತಿಳಿಸಿದ್ದಾರೆ.
ಪವಾರ್ ಈ ಹಿಂದೆ ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಹಾಗೂ ಜಿಲ್ಲಾ ಮ್ಯಾಜಿಸ್ಟ್ರೇಟ್ ಆಗಿ ಕಾರ್ಯ ನಿರ್ವಹಿಸಿ ನಿವೃತ್ತರಾಗಿದ್ದರು.







