ಕಾನೂನು ಸಚಿವಾಲಯದಿಂದ ಸುಪ್ರೀಂಗೆ 69 ನ್ಯಾಯಾಧೀಶರ ಹೆಸರು ಶಿಫಾರಸು

ಹೊಸದಿಲ್ಲಿ, ಜು. 13: ಉಚ್ಚ ನ್ಯಾಯಾಲಯದ ನ್ಯಾಯಾಧೀಶರ ನೇಮಕಕ್ಕೆ ಕಾನೂನು ಸಚಿವಾಲಯ 69 ನ್ಯಾಯಾಧೀಶರ ಹೆಸರನ್ನು ಸರ್ವೋಚ್ಚ ನ್ಯಾಯಾಲಯಕ್ಕೆ ಶಿಫಾರಸು ಮಾಡಿದೆ.
ಈಗಿನ ನಿಯಮದ ಪ್ರಕಾರ ಉಚ್ಚ ನ್ಯಾಯಾಲಯದ ಕೊಲೀಜಿಯಂ ಶಾರ್ಟ್ ಲಿಸ್ಟ್ ಮಾಡಿದ ಅಭ್ಯರ್ಥಿಗಳ ಹೆಸರನ್ನು ಕಳುಹಿಸಿ ಕೊಡುತ್ತದೆ. ಈ ಪಟ್ಟಿಯನ್ನು ಕಾನೂನು ಸಚಿವಾಲಯ ಸರ್ವೋಚ್ಚ ನ್ಯಾಯಾಲಯದ ಕೊಲೀಜಿಯಂಗೆ ರವಾನಿಸುತ್ತದೆ. ಸರ್ವೋಚ್ಚ ನ್ಯಾಯಾಲಯದ ಕೊಲೀಜಿಯಂಗೆ ಹೆಸರು ಕಳುಹಿಸಿಕೊಡುವ ಮುನ್ನ ಕಾನೂನು ಸಚಿವಾಲಯ ಐಬಿ ವರದಿಯನ್ನು ಲಗತ್ತಿಸುತ್ತದೆ. 23 ಉಚ್ಚ ನ್ಯಾಯಾಲಯಗಳ ಕೊಲೀಜಿಯಂ 69 ಹೆಸರುಗಳನ್ನು ಶಿಫಾರಸು ಮಾಡಿದೆ.
ಒಮ್ಮೆ ಶಿಫಾರಸು ಸರ್ವೋಚ್ಚ ನ್ಯಾಯಾಲಯಕ್ಕೆ ತಲುಪಿದರೆ, ಅದು ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತದೆ. ಉಚ್ಚ ನ್ಯಾಯಾಲಯ ಶಿಫಾರಸು ಮಾಡಿದ ಶೇ. 40 ಹೆಸರನ್ನು ಸರ್ವೋಚ್ಚ ನ್ಯಾಯಾಲಯ ತಿರಸ್ಕರಿಸುತ್ತದೆ. ಈ ವರ್ಷ 24 ಉಚ್ಚ ನ್ಯಾಯಾಲಯಗಳಿಗೆ 34 ನ್ಯಾಯಾಧೀಶರು ನೇಮಕರಾಗಿದ್ದಾರೆ. 2016ರಲ್ಲಿ ಉಚ್ಚ ನ್ಯಾಯಾಲಯಗಳಿಗೆ 34 ನ್ಯಾಯಾಧೀಶರನ್ನು ನೇಮಕ ಮಾಡಲಾಗಿತ್ತು. ಸ್ವಾತಂತ್ರದ ಬಳಿಕ ಅತೀ ಹೆಚ್ಚಿನ ಸಂಖ್ಯೆಯಲ್ಲಿ ನ್ಯಾಯಾಧೀಶರನ್ನು ನೇಮಕ ಮಾಡಿರುವುದು ಇದೇ ಮೊದಲು.







