ರೌಡಿ ಶೀಟರ್ ಜಿಪಂ ಸದಸ್ಯನಾಗಿರುವುದು ಪ್ರಜಾಪ್ರಭುತ್ವದ ದುರಂತ: ಹರಿಕೃಷ್ಣ ಬಂಟ್ವಾಳ

ಬಂಟ್ವಾಳ, ಜು.14: ಬಂಟ್ವಾಳ ನಗರ-ಗ್ರಾಮಾಂತರ, ಬಜ್ಪೆ ಪೊಲೀಸ್ ಠಾಣೆ ಸೇರಿದಂತೆ ಒಟ್ಟು 16 ಪ್ರಕರಗಳು ಜಿಲ್ಲಾ ಪಂಚಾಯತ್ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ವಿರುದ್ಧ ದಾಖಲಾಗಿದ್ದು, ಪೊಲೀಸ್ ದಾಖಲೆಯ ಪ್ರಕಾರ ಆತ ರೌಡಿ ಶೀಟರ್. ಆತನಿಂದ ರಾಜಕೀಯ ಪಾಠ ಕೇಳಿಸಿಕೊಳ್ಳಬೇಕಾದ ಪರಿಸ್ಥಿತಿ ಮತದಾರರಿಗೆ ಬಂದಿರುವುದು ಪ್ರಜಾಪ್ರಭುತ್ವದ ದುರಂತ ಎಂದು ಬಿಜೆಪಿ ಜಿಲ್ಲಾ ವಕ್ತಾರ ಹರಿಕೃಷ್ಣ ಬಂಟ್ವಾಳ ಟೀಕಿಸಿದ್ದಾರೆ.
ಶನಿವಾರ ಬಿ.ಸಿ.ರೋಡ್‌ನಲ್ಲಿರುವ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಇದುವರೆಗೆ ಪೊಲೀಸ್ ಠಾಣೆಯಲ್ಲಿ ನೇತು ಹಾಕಲಾಗುವ ಆರೋಪಿಗಳ ಭಾವಚಿತ್ರವುಳ್ಳ ಫಲಕದಿಂದ ಪ್ರಕಾಶ್ ಶೆಟ್ಟಿಯ ಭಾವಚಿತ್ರವನ್ನು ಮಾಜಿ ಸಚಿವ ರಮಾನಾಥ ರೈ ಅವರ ಪ್ರಭಾವದಿಂದ ಕಿತ್ತು ಹಾಕಲಾಗಿದ್ದು, ಇದು ಪೊಲೀಸ್ ಇಲಾಖೆ ಮತ್ತು ಪ್ರಜಾಪ್ರಭುತ್ವ ವ್ಯವಸ್ಥಗೆ ಅವಮಾನವಾಗಿದೆ. ಪೊಲೀಸರು ಮತ್ತೆ ಅದೇ ಬೋರ್ಡ್‌ನಲ್ಲಿ ಆತನ ಭಾವಚಿತ್ರವನ್ನು ನೇತು ಹಾಕಬೇಕು ಎಂದು ಒತ್ತಾಯಿಸಿದರು.
ರಮಾನಾಥ ರೈ ಅವರಿಗೆ ಮುಂದಿನ ದಿನಗಳಲ್ಲಿ ರಾಜಕೀಯ ಭವಿಷ್ಯ ಮಂಕಾಗುತ್ತಿರುವುದನ್ನು ಅರಿತಿರುವ ಪ್ರಕಾಶ್ ಶೆಟ್ಟಿ, ತನ್ನ ಅಕ್ರಮ ಕಸುಬುಗಳಿಗೆ ತೊಂದರೆಯಾಗುತ್ತಿದೆ ಎಂಬ ಚಿಂತೆಯಿಂದ ಮತ್ತು ಅವರ ಹತಾಶ ರಾಜಕಾರಣದ ಪ್ರತೀಕವಾಗಿ ನನ್ನ ವಿರುದ್ಧ ಹೇಳಿಕೆ ನೀಡಿದ್ದಾರೆ ಎಂದು ಹರಿಕೃಷ್ಣ ಬಂಟ್ವಾಳ್ ತಿರುಗೇಟು ನೀಡಿದ್ದಾರೆ.
ನಾನ್-ಸಿಆರ್‌ಝಡ್ ಪ್ರದೇಶದಿಂದಲೇ ಮರಳುಗಾರಿಕೆ: ಆರೋಪ
ತನ್ನ ಮರಳು ವ್ಯವಹಾರದ ಬಗ್ಗೆ ಮಾಹಿತಿ ನೀಡಿರುವ ಪ್ರಕಾಶ್ ಶೆಟ್ಟಿ, ಸಕ್ರಮಕ್ಕಿಂತ ಅಕ್ರಮ ಮರಳು ದಂಧೆಯೇ ಜಾಸ್ತಿ ಎಂಬುವುದು ಎಲ್ಲರಿಗೂ ಗೊತ್ತಿರುವ ನಗ್ನ ಸತ್ಯವಾಗಿದೆ. ಇವರು ಕಳೆದ ಐದು ವರ್ಷಗಳಲ್ಲಿ ನಾನ್-ಸಿಆರ್‌ಝಡ್ ಪ್ರದೇಶದಿಂದಲೇ ಮರಳುಗಾರಿಕೆ ಮಾಡಿದ್ದಾರೆಯೇ ಹೊರತು ಕಾನೂನು ಪ್ರಕಾರ ಸಿಆರ್‌ಝಡ್ ಪ್ರದೇಶದಲ್ಲಿ ಮರಳುಗಾರಿಕೆ ಮಾಡಿಲ್ಲ ಎಂದು ಆಪಾದಿಸಿರುವ ಅವರು, ಮರಳು ದಂಧೆಯಿಂದ ಸರಕಾರದ ಬೊಕ್ಕಸಕ್ಕೆ ಕೋಟಿ ರೂ. ನಷ್ಟ ಉಂಟಾಗಿದ್ದು, ಈ ದಂಧೆಗೆ ಕಡಿವಾಣ ಹಾಕಲು ಎಸ್ಪಿ ಸುಧೀರ್ ರೆಡ್ಡಿಯಂತಹ ಅಧಿಕಾರಿಗಳನ್ನು ಜಿಲ್ಲೆಗೆ ನಿಯೋಜಿಸಬೇಕು ಎಂದು ಒತ್ತಾಯಿಸಿದರಲ್ಲದೆ, ಪೊಲೀಸರು ಅಕ್ರಮ ಮರಳುಗಾರಿಕೆಗೆ ಬೆಂಬಲ ನೀಡಿದಲ್ಲಿ ಬಿಜೆಪಿ ಉಗ್ರ ಪ್ರತಿಭಟನೆ ನಡೆಸಲಿದೆ ಎಂದು ಎಚ್ಚರಿಸಿದರು.
ಇವರ ಎಲ್ಲ ಅಕ್ರಮ ದಂಧೆಗಳು ಮಾಜಿ ಸಚಿವ ರಮಾನಾಥ ರೈ ಅವರ ಬೆಂಬಲದಿಂದಲೇ ನಡೆದಿದ್ದು, ಚಂದ್ರಪ್ರಕಾಶ್ ಶೆಟ್ಟಿ ಅವರಂತಹರಿಂದಲೇ ಇಲ್ಲಿ ಕಾಂಗ್ರೆಸ್ ನೆಲಕಚ್ಚಿದೆ ಎಂದು ತಿಳಿಸಿದ ಅವರು, ನಾನು ಪೂಜಾರಿ ಅಥವಾ ರಮಾನಾಥ ರೈ ಅವರಿಂದ ಕಮಿಷನ್ ಪಡೆದಿದ್ದರೆ, ಅದನ್ನು ಸಾಬೀತು ಪಡಿಸಲಿ, ಕಾನತ್ತೂರು ಇಲ್ಲವೇ ಧರ್ಮಸ್ಥಳ ಕ್ಷೇತ್ರಕ್ಕೆ ಪ್ರಮಾಣಕ್ಕೆ ತಾನು ಬರಲು ಸಿದ್ಧನಿದ್ದೇನೆ ಎಂದ ಅವರು, ತಾನು ಪೂಜಾರಿ ಅವರೊಂದಿಗೆ 35 ವರ್ಷಗಳ ಸುದೀರ್ಘ ಸಂಪರ್ಕಗಳ ಸಂದರ್ಭದಲ್ಲಿ ನಯಾಪೈಸೆಗೂ ಕೈಚಾಚಿಲ್ಲ ಎಂಬುವುದನ್ನು ಖುದ್ದು ಪೂಜಾರಿ ಅವರೇ ಬಹಿರಂಗ ಪಡಿಸಿದ್ದಾರೆ. ಇನ್ನು ಇವರ ಯಾವುದೇ ಸರ್ಟಿಫಿಕೇಟ್ ಅಗತ್ಯವಿಲ್ಲ ಎಂದರು.
ಕಳೆದ ವಿಧಾನಪರಿಷತ್‌ನ ಚುನಾವಣೆ ಸಂದರ್ಭದಲ್ಲಿ ಪ್ರತಿಯೊಬ್ಬ ಜನಪ್ರತಿನಿಧಿ ಮತದಾರರಿಗೆ 10ರಿಂದ 25 ಸಾವಿರ ರೂ.ವಿನಂತೆ ಸುಮಾರು 9 ಕೋಟಿ ರೂ.ವನ್ನು ಇದೇ ಚಂದ್ರಪ್ರಕಾಶ್ ಶೆಟ್ಟಿ ಅವರ ನೇತೃತ್ವದಲ್ಲಿ ಹಂಚಿಕೆ ಮಾಡಲಾಗಿದ್ದು, ಈ ಹಣದ ಮೂಲ ಯಾವುದು ಎಂದು ಬಹಿರಂಗ ಪಡಿಸಲಿ ಎಂದರು. ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಬಂಟ್ವಾಳ ಕ್ಷೇತ್ರಾಧ್ಯಕ್ಷ ದೇವದಾಸ್ ಶೆಟ್ಟಿ, ಪ್ರ.ಕಾರ್ಯದರ್ಶಿ ರಾಮದಾಸ್ ಬಂಟ್ವಾಳ, ಜಿಲ್ಲಾ ಎಸ್ಟಿ ಮೋರ್ಚಾ ಅಧ್ಯಕ್ಷ ದಿನೇಶ್ ಅಮ್ಟೂರು, ಕ್ಷೇತ್ರದ ಯುವ ಮೋರ್ಚಾದ ಪ್ರ.ಕಾರ್ಯದರ್ಶಿ ಸಂತೋಷ್ ರಾಯಿಬೆಟ್ಟು ಉಪಸ್ಥಿತರಿದ್ದರು.
ತನಗೆ 15 ಬೆದರಿಕೆ ಪತ್ರಗಳು ಬಂದಿವೆ
ರಮಾನಾಥ ರೈ ಅವರನ್ನು ತಾನು ಟೀಕಿಸಿದ ಕಾರಣಕ್ಕೆ ಇದುವರೆಗೆ ತನಗೆ 15 ಬೆದರಿಕೆ ಪತ್ರಗಳು ಬಂದಿವೆ. ಈ ಪೈಕಿ ಒಂದು ಪತ್ರವು ನಾಗಪುರದಿಂದ ಬಂದಿದ್ದರೆ, ಉಳಿದವು ಬಿ.ಸಿ.ರೋಡ್, ಬಂಟ್ವಾಳ ಪರಿಸರದಿಂದಲೇ ಅಂಚೆ ಮೂಲಕ ಬಂದಿದೆ. ಇಂತಹ ಗೊಡ್ಡು ಬೆದರಿಕೆಗಳಿಗೆ ತಾನು ಅಂಜುವುದಿಲ್ಲ. ಇದರಿಂದ ತನ್ನ ಬಾಯಿ ಮುಚ್ಚಿಸಲು ಸಾಧ್ಯವಿಲ್ಲ ಎಂದರು.
ರೈ ಪಂಚಾಯತ್ ಚುನಾವಣೆಗೆ ನಿಂತರೂ ಗೆಲ್ಲುವುದಿಲ್ಲ: ಬಂಟ್ವಾಳ್
ಅವಿಭಜಿತ ದ.ಕ.ಜಿಲ್ಲೆಯಲ್ಲಿ ಕಾಂಗ್ರೆಸ್‌ನ ಹೀನಾಯ ಸೋಲಿಗೆ ಮಾಜಿ ಸಚಿವ ರಮಾನಾಥ ರೈ ಅವರೇ ಕಾರಣ ಎಂದು ಜಿಲ್ಲೆಯ ಕಾಂಗ್ರೆಸ್‌ನ ಮಾಜಿ ಶಾಸಕರು ನೇರವಾಗಿ ಆರೋಪ ಮಾಡಿದ್ದಾರೆ. ಹಾಗಾಗಿ ಮುಂದಿನ ಲೋಕಸಭೆ ಸಭೆ ಚುನಾವಣೆಯಲ್ಲಿ ರೈ ಸ್ಪರ್ದಿಸಿದರೆ ಬಿಜೆಪಿಗೆ ಬೋನಸ್ ಆಗಲಿದೆ ಎಂದು ಭವಿಷ್ಯ ನುಡಿದ ಅವರು, ಇನ್ನು ಮುಂದೆ ರೈ ಅವರು ಪಂಚಾಯತ್ ಚುನಾವಣೆಗೆ ನಿಂತರೂ ಗೆಲ್ಲುವುದಿಲ್ಲ, ಅವರನ್ನು ಗೆಲ್ಲಲೂ ನಾವು ಬಿಡುವುದಿಲ್ಲ ಎಂದು ವ್ಯಂಗ್ಯ ವಾಡಿದರು.







