ಇಮಾಮ್- ಮುಹಝ್ಝಿನ್‌ಗೆ ಗೌರವಧನ ನೀಡುವಲ್ಲಿ ವಿಳಂಬ: ಎಸ್‌ಡಿಪಿಐ ಆಗ್ರಹ
ಮಂಗಳೂರು, ಜು.14: ರಾಜ್ಯ ವಕ್ಫ್ ಇಲಾಖೆಯು ಮಸೀದಿಗಳ ಪೇಶ್-ಎ-ಇಮಾಮ್ ಮತ್ತು ಮುಹಝ್ಝಿನ್‌ರಿಗೆ ನೀಡುವ ಗೌರವಧನವು ವಿಳಂಬವಾಗುತ್ತಿದ್ದು, ಸಕಾಲಕ್ಕೆ ಬಿಡುಗಡೆಗೊಳಿಸಬೇಕು ಎಂದು ಎಸ್‌ಡಿಪಿಐ ದ.ಕ.ಜಿಲ್ಲಾಧ್ಯಕ್ಷ ಅಥಾವುಲ್ಲಾ ಜೋಕಟ್ಟೆ ತಿಳಿಸಿದ್ದಾರೆ.
ರಾಜ್ಯ ಸರಕಾರವು ಹಿಂದುಳಿದ, ಅಲ್ಪಸಂಖ್ಯಾತ, ಶೋಷಿತ ಜನರನ್ನು ಆರ್ಥಿಕವಾಗಿ ಮೇಲೆತ್ತುವ ನಿಟ್ಟಿನಲ್ಲಿ ಹಲವು ಸಹಾಯಧನ ಮತ್ತು ಗೌರವ ಧನ ಯೋಜನೆಗಳನ್ನು ಜಾರಿಗೆ ತಂದಿರುತ್ತದೆ. ಆದರೆ ಅರ್ಹ ವ್ಯಕ್ತಿಗಳಿಗೆ ಯೋಜನೆಯನ್ನು ತಲುಪಿಸಬೇಕು ಎನ್ನುವ ಸರಕಾರದ ಉದ್ದೇಶವು ಸಾರ್ವಜನಿಕರಲ್ಲಿನ ಮಾಹಿತಿಯ ಕೊರತೆಯಿಂದಾಗಿ ಪರಿಪೂರ್ಣಗೊಳ್ಳುತ್ತಿಲ್ಲ. ಅದಕ್ಕೆ ಪೂರಕವಾಗಿ ಜಿಲ್ಲೆಯ ಹೆಚ್ಚಿನ ಮಸೀದಿಗಳ ಇಮಾಮರು ಮತ್ತು ಮುಹಝ್ಝಿನ್‌ಗಳು ಯೋಜನೆಯ ಬಗೆಗಿನ ಪೂರ್ಣ ಮಾಹಿತಿಯ ಕೊರತೆಯಿಂದಾಗಿ ಹೆಚ್ಚಿನವರಿಗೆ ಈ ಯೋಜನೆ ಲಭ್ಯವಾಗುತ್ತಿಲ್ಲ.
ಈ ಮಧ್ಯೆ ಈಗಾಗಲೇ ಅರ್ಜಿ ಸಲ್ಲಿಸಿದ ಹೆಚ್ಚಿನ ಅರ್ಹ ಇಮಾಮ್ ಮತ್ತು ಮುಹಝ್ಝಿನ್‌ಗಳ ಗೌರವಧನವು ಅರ್ಜಿ ಸಲ್ಲಿಕೆಯಾಗಿ ಒಂದು ವರ್ಷ ಕಳೆದರೂ ಇಲಾಖೆಯಿಂದ ಬಿಡುಗಡೆಗೊಂಡಿಲ್ಲ. ಹಾಗಾಗಿ ತಕ್ಷಣ ಬಿಡುಗಡೆಗೊಳಿಸಬೇಕು. ಇಲ್ಲದಿದ್ದರೆ ಪಕ್ಷದ ವತಿಯಿಂದ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದ್ದಾರೆ.





