ಕೊಡಗಿನ ಕೂಗನ್ನು ವೈರಲ್ ಮಾಡಿದ ಬಾಲಕ ಫತಾ: ಟೀಕೆಗೆ ಬೇಸರಗೊಂಡ ಮುಖ್ಯಮಂತ್ರಿಯಿಂದ ಸ್ಪಂದನೆಯ ಭರವಸೆ
ಮಡಿಕೇರಿ, ಜು.14: ಧಾರಾಕಾರ ಮಳೆಯಿಂದ ಕೊಡಗು ಕೊಚ್ಚಿ ಹೋಗುವಂತಹ ಪರಿಸ್ಥಿತಿ ಇದೆ. ಕಾವೇರಿ ನದಿ ನೀರಿನ ಲಾಭ ಪಡೆಯುವ ನೀವು ಹಾಲು ನೀಡಿದ ತಾಯಿಯಂತಿರುವ ಕೊಡಗು ಜಿಲ್ಲೆಯನ್ನು ಬಜೆಟ್‍ನಲ್ಲಿ ನಿರ್ಲಕ್ಷಿಸಿದ್ದೀರಿ ಎಂದು 8 ನೇ ತರಗತಿಯ ವಿದ್ಯಾರ್ಥಿಯೊಬ್ಬ ಮಾಡಿದ ವೀಡಿಯೋ ವೈರಲ್ ಆಗಿದ್ದು, ವಿಡಿಯೋ ಮುಖ್ಯಮಂತ್ರಿಗಳ ಮನಮುಟ್ಟುವಂತೆ ಮಾಡಿರುವ ಪ್ರಸಂಗ ನಡೆದಿದೆ.
ಬಾಲಕನ ಮಾತನ್ನು ಕೇಳಿ ಬೇಸರಗೊಂಡಿರುವ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು, 'ಕೊಡಗು ಜಿಲ್ಲೆಗೆ ಭೇಟಿ ನೀಡುವುದಾಗಿ ಈಗಾಗಲೆ ಭರವಸೆ ನೀಡಿದ್ದೇನೆ, ಆದರೂ ಈ ರೀತಿಯ ವೀಡಿಯೋಗಳನ್ನು ವೈರಲ್ ಮಾಡಲಾಗುತ್ತಿದೆ' ಎಂದು ಬೆಂಗಳೂರಿನಲ್ಲಿ ನಡೆದ ಅಭಿನಂದನಾ ಸಮಾರಂಭದಲ್ಲಿ ತಿಳಿಸಿದ್ದಾರೆ.
ನಿತ್ಯ ಮಳೆಯಿಂದ ಕೊಡಗು ತತ್ತರಿಸಿದ್ದು, ಕೊಡಗಿನ ಜನಸಾಮಾನ್ಯರು, ಕೃಷಿಕರು ಹಾಗೂ ಕಾರ್ಮಿಕ ವರ್ಗ ಸಂಕಷ್ಟಕ್ಕೆ ಒಳಗಾಗಿರುವುದನ್ನು ಅಷ್ಟೇ ಪರಿಣಾಮಕಾರಿಯಾಗಿ ಎಮ್ಮೆಮಾಡಿನ ನದಿಪಾತ್ರದಲ್ಲಿ ನಿಂತು ವೀಡಿಯೋ ಮಾಡಿ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಮಾಡಿರುವ ಬಾಲಕ ಫತಾ ಈಗ ಸುದ್ದಿಯಲ್ಲಿದ್ದಾನೆ.
ಮಡಿಕೇರಿ ತಾಲೂಕಿನ ನಾಪೋಕ್ಲು ಸಮೀಪದ ಎಮ್ಮೆಮಾಡಿನಲ್ಲಿ, ಕಾವೇರಿ ನದಿಯ ಪ್ರವಾಹದಿಂದ ಆವೃತ್ತವಾದ ಗದ್ದೆ ಬಯಲಿನ ಬಳಿ ಕೊಡೆಹಿಡಿದು ನಿಂತು, ಕೊಡಗಿನ ಮಳೆ, ಅದರಿಂದ ಆಗಿರುವ ಹಾನಿ, ಸರ್ಕಾರ, ಜನಪ್ರತಿನಿಧಿಗಳ ನಿಷ್ಕಾಳಜಿಯ ಬಗ್ಗೆ ನಿರರ್ಗಳವಾಗಿ ಮಾತನಾಡಿರುವ ಬಾಲಕನ ವಿಡಿಯೋ ಇದೀಗ ಬಹುತೇಕ ದೃಶ್ಯ ವಾಹಿನಿಗಳಲ್ಲಿ ಚರ್ಚಿತ ವಿಷಯವಾಗಿದೆ. ಭಾರೀ ಮಳೆಯಿಂದ ಕೊಡಗು ಸಂಕಷ್ಟಕ್ಕೆ ಸಿಲುಕಿದರೂ, ಇಲ್ಲಿನ ಕಾವೇರಿ ನದಿ ಮೈಸೂರು, ಮಂಡ್ಯ, ಬೆಂಗಳೂರು ಸೇರಿದಂತೆ ನೆರೆಯ ತಮಿಳುನಾಡು ರಾಜ್ಯಕ್ಕೆ ನೀರುಣಿಸುತ್ತಿದೆ. ಹೀಗಿದ್ದೂ ತನ್ನೆದೆಯ ಹಾಲುಣಿಸುತ್ತಿರುವ ಕಾವೇರಿಯ ನಾಡಿನತ್ತ ಆಡಳಿತ ವ್ಯವಸ್ಥೆ ಸ್ಪಂದಿಸದಿರುವ ಬಗ್ಗೆ ಬಾಲಕ ವಿಷಾದ ವ್ಯಕ್ತಪಡಿಸಿದ್ದಾನೆ.
ಭಾರೀ ಮಳೆಯಿಂದ ಕಾಫಿ, ಕರಿಮೆಣಸು, ಭತ್ತದ ಕೃಷಿ ಹಾನಿಯಾದರೆ, ಮತ್ತೊಂದೆಡೆ ಕಾಡಾನೆಗಳ ಉಪಟಳದಿಂದ ಕೃಷಿಕ ಬೇಸತ್ತಿದ್ದಾನೆ. ಕಾರ್ಮಿಕರು ಕೆಲಸ ನಿರ್ವಹಿಸಲಾಗದ ಸ್ಥಿತಿ ಇದೆ. ಇಂತಹ ಪರಿಸ್ಥಿತಿಯಲ್ಲಿ ಮುಖ್ಯಮಂತ್ರಿಗಳು ತಮ್ಮ ಬಜೆಟ್‍ನಲ್ಲಿ ಕೊಡಗಿಗೆ ಅಗತ್ಯ ನೆರವನ್ನು ಒದಗಿಸದಿರುವುದು ಬೇಸರದ ವಿಚಾರವೆಂದು ಫತಾ ಹೇಳಿಕೊಂಡಿದ್ದಾನೆ.
ಬಿಎಸ್‍ವೈ ಗೂ ಕಿವಿ ಮಾತು
‘ನೀವು ವಿಧಾನ ಸಭೆಯ ಒಳಗೆ ಮತ್ತು ಹೊರಗೆ ಎಷ್ಟೇ ಮಾತನಾಡಿದರೂ ಪ್ರಯೋಜನವಿಲ್ಲ’ ಎಂದು ಸದನದ ವಿರೋಧ ಪಕ್ಷದ ನಾಯಕ ಬಿ.ಎಸ್. ಯಡಿಯೂರಪ್ಪ ಅವರಿಗೂ ಸಂದೇಶ ನೀಡಿರುವ ಬಾಲಕ, ಪ್ರಧಾನಮಂತ್ರಿ ಮೋದಿ ಅವರ ಮೂಲಕ ಅಗತ್ಯ ನೆರವನ್ನು ಒದಗಿಸಲು ಮುಂದಾಗಬೇಕೆಂದು ಹೇಳಿದ್ದಾನೆ. ಹೀಗೆ ಜಿಲ್ಲೆಯ ವಿವಿಧ ಸಮಸ್ಯೆಗಳ ಬಗ್ಗೆ ಸುದೀರ್ಘವಾಗಿ ಮಾತನಾಡಿದ್ದಾನೆ.
ಈ ವೀಡಿಯೋವನ್ನು ಗಮನಿಸಿರುವ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು, 'ಈಗಾಗಲೇ ಸದನದಲ್ಲಿ ಶಾಸಕ ಕೆ.ಜಿ.ಬೋಪಯ್ಯ ಅವರಿಗೆ, ಕೊಡಗು ಜಿಲ್ಲೆಗೆ ಬಂದು ಅಲ್ಲಿನ ಸಮಸ್ಯೆಗಳ ಬಗ್ಗೆ ಪರಿಶೀಲಿಸುವುದಾಗಿ ತಿಳಿಸಿದ್ದೇನೆ. ಈ ಎಲ್ಲಾ ಸಮಸ್ಯೆಗಳು ಕಳೆದ ಎರಡು ತಿಂಗಳಿನಿಂದ ಬಂದಿರುವಂತಹದ್ದೇ ಎಂದು ಪ್ರಶ್ನಿಸಿದ್ದಾರೆ. 70 ವರ್ಷಗಳ ಕಾಲ ಆಡಳಿತ ನಡೆಸಿದ ಹಿಂದಿನ ಸರ್ಕಾರಗಳು ಸಮಸ್ಯೆಗಳನ್ನು ಬಗೆಹರಿಸಲು ಯಾಕೆ ಗಮನ ಹರಿಸಿಲ್ಲವೆಂದು ಬೇಸರ ವ್ಯಕ್ತಪಡಿಸಿದ್ದಾರೆ.
ತೀವ್ರ ಚರ್ಚೆಗೆ ಗ್ರಾಸವಾಗಿರುವ ಬಾಲಕನ ವೀಡಿಯೋದಿಂದಲಾದರೂ ಕಾವೇರಿ ನದಿಯ ಉಗಮ ಸ್ಥಾನ ಕೊಡಗು ಜಿಲ್ಲೆಗೆ ನ್ಯಾಯ ಸಿಗುತ್ತದೆಯೇ ಎಂಬುವುದನ್ನು ಕಾದು ನೋಡಬೇಕಾಗಿದೆ.