ನೋವಿನ ವಿಷ ನುಂಗಿ ವಿಷಕಂಠನಾಗಿದ್ದೇನೆ: ಭಾವುಕರಾಗಿ ಕಣ್ಣೀರಿಟ್ಟ ಸಿ.ಎಂ ಕುಮಾರಸ್ವಾಮಿ

ಬೆಂಗಳೂರು, ಜು.14: ಸಮ್ಮಿಶ್ರ ಸರಕಾರದಲ್ಲಿ ಮುಖ್ಯಮಂತ್ರಿಯಾಗಿ ನಾನು ಸಂತೋಷವಾಗಿಲ್ಲ. ನೋವಿನ ವಿಷ ನುಂಗಿ ವಿಷಕಂಠನಾಗಿದ್ದುಕೊಂಡು, ನಾಡಿನ ಜನರಿಗೆ ಹಲವಾರು ಜನಪರ ಯೋಜನೆಗಳ ಮೂಲಕ ಅಮೃತ ನೀಡುವ ಪ್ರಯತ್ನ ಪಡುತ್ತಿರುವೆ. ನನಗೆ ಸಿಎಂ ಕುರ್ಚಿಯ ಮೇಲೆ ಯಾವುದೇ ಆಸೆಯಿಲ್ಲ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಭಾವುಕರಾಗಿ ನುಡಿದರು.
ನಗರದ ಜೆಡಿಎಸ್ ಕಚೇರಿಯಲ್ಲಿಂದು ಆಯೋಜಿಸಿದ್ದ ಸನ್ಮಾನ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಯಾವುದೇ ಪಕ್ಷಕ್ಕೆ ಜನಾಶೀರ್ವಾದ ಸಿಗದ ಕಾರಣ ಪರಿಸ್ಥಿತಿ ಒತ್ತಡಕ್ಕೆ ಸಿಲುಕಿ ಅನಿವಾರ್ಯವಾಗಿ ಸಮ್ಮಿಶ್ರ ಸರಕಾರದ ಮುಖ್ಯಮಂತ್ರಿಯಾಗಿದ್ದೇನೆ. ಇದಕ್ಕೆ ತಮಗೆ (ಕಾರ್ಯಕರ್ತರಿಗೆ) ಸಂತೋಷವಾಗಿದೆ. ಆದರೆ ನಾನು ಸಂತೋಷದಲ್ಲಿಲ್ಲ. ವಿಷಕಂಠನಾಗಿ ನೋವು ನುಂಗಿಕೊಂಡಿದ್ದೇನೆ. ರಾಜ್ಯದ ಜನತೆಗೆ ಅಮೃತವನ್ನು ನೀಡುವ ಪ್ರಯತ್ನ ಮಾಡುತ್ತಿದ್ದೇನೆ ಎಂದು ಕಣ್ಣೀರು ಹಾಕಿದರು.
ಅಧಿಕಾರಕ್ಕೆ ಬಂದ ಕೂಡಲೇ ಯೋಜನೆಗಳನ್ನು ಜಾರಿ ಮಾಡಲು ಸಾಧ್ಯವಿಲ್ಲ. ಸಮ್ಮಿಶ್ರ ಸರಕಾರದಲ್ಲಿ ಕೆಲವು ಇತಿಮಿತಿಗಳಿರುತ್ತವೆ. ಆದರೆ, ಜನರು ಈಗಲೇ ಘೋಷಣೆ ಮಾಡಿದ ಎಲ್ಲ ಯೋಜನೆಗಳನ್ನು ಈಡೇರಿಸಬೇಕು ಎಂದು ಬಯಸುತ್ತಿದ್ದಾರೆ. ಹಿಂದೆ ಬಿಜೆಪಿ ಸರಕಾರದಲ್ಲಿ ಬಿಜೆಪಿ ನಾಯಕರು ಬಜೆಟ್‌ನಲ್ಲಿ ನೀಡಿದ ಎಲ್ಲ ಭರವಸೆಗಳನ್ನು ಈಡೇರಿಸಲು ಸಾಧ್ಯವಿದೆಯಾ ಎಂದು ಪ್ರಶ್ನಿಸಿದ್ದರು. ಆದರೆ, ನಾನು ಎಲ್ಲವನ್ನೂ ಹಂತ ಹಂತವಾಗಿ ಈಡೇರಿಸುತ್ತೇನೆ ಎಂದು ಭರವಸೆ ನೀಡಿದರು.
ಕಾಂಗ್ರೆಸ್ ಪಕ್ಷದ ಎಲ್ಲ ನಿರ್ಬಂಧಗಳನ್ನು ಒಪ್ಪಿಕೊಂಡು ಬಜೆಟ್ ಮಂಡಿಸಿದ್ದೇನೆ. ಅದರಲ್ಲಿ ಕೇವಲ 10 ಸಾವಿರ ಕೋಟಿ ಏರಿಕೆ ಮಾಡಲಾಗಿದೆ. ಅಲ್ಲದೆ, 40 ಸಾವಿರ ಕೋಟಿ ರೂ.ಗಳು ರೈತರ ಸಾಲ ಮನ್ನಾ ಮಾಡಲಾಗಿದೆ. ಸಾಲ ಮನ್ನಾ ಸೇರಿದಂತೆ ವಿವಿಧ ಯೋಜನೆಗಳ ಅನುಷ್ಠಾನಕ್ಕಾಗಿ ಹಣ ಎಲ್ಲಿಂದ ಹೊಂದಿಸಲು ಸಾಧ್ಯವಾಗುತ್ತದೆ. ಅದಕ್ಕಾಗಿ, ಪೆಟ್ರೋಲ್ ಮತ್ತು ಡಿಸೇಲ್ ಮೇಲೆ 1 ರೂ. ಏರಿಕೆ ಮಾಡಲಾಗಿತ್ತು. ಆದರೆ, ಇದನ್ನೇ ಅಪಪ್ರಚಾರ ಮಾಡಲು ಬಿಜೆಪಿ ನಾಯಕರು ಮುಂದಾಗಿದ್ದಾರೆ. ಕೇಂದ್ರದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ನಂತರ 10 ರೂ.ವರೆಗೂ ಏರಿಕೆ ಮಾಡಲಾಗಿದೆ. ಇದರ ವಿರುದ್ಧ ಯಾರು ಧ್ವನಿ ಎತ್ತುತ್ತಿಲ್ಲ ಯಾಕೆ ಎಂದು ಪ್ರಶ್ನಿಸಿದರು.
ವಿಷ ಕೊಡ್ತೀರೋ? ಅನ್ನ ಕೊಡ್ತೀರೋ?: ಸಹಕಾರಿ ಬ್ಯಾಂಕ್‌ನಲ್ಲಿ ಸಾಲ ತೀರಿಸಿದ ರೈತರಿಗೆ ಸಹಾಯಧನ ನೀಡಬೇಕು ಎಂದು ನಮ್ಮ ಶಾಸಕರು ಒತ್ತಡ ಹಾಕಿದ್ದರಿಂದ ಮೊದಲಿಗೆ 25 ಸಾವಿರ ಘೋಷಣೆ ಮಾಡಿದೆ. ಅದು ಸಾಕಾಗುವುದಿಲ್ಲ ಎಂದು ಬೇಡಿಕೆ ಬಂದಾಗ ಅದನ್ನು 50 ಸಾವಿರಕ್ಕೆ ಏರಿಕೆ ಮಾಡಿದೆ. ಆದರೆ, ಸಹಕಾರ ಸಚಿವ ಬಂಡೆಪ್ಪ ಕಾಶಂಪೂರ್ ಸಹಕಾರಿ ಬ್ಯಾಂಕ್‌ನಲ್ಲಿರುವ ಸಾಲ ಮನ್ನಾ ಮಾಡಬೇಕು ಎಂದು ಬೇಡಿಕೆ ಸಲ್ಲಿಸಿದರು. ಅದರಿಂದಾಗಿ, ಪ್ರಸಕ್ತ ವರ್ಷದಲ್ಲಿಯೇ 1 ಲಕ್ಷದವರೆಗಿನ ಸಾಲವನ್ನು ಮನ್ನಾ ಮಾಡಲಾಗುತ್ತದೆ. ಇದರಿಂದಾಗಿ 22 ಲಕ್ಷ ರೈತ ಕುಟುಂಬಗಳಿಗೆ ನೆರವಾಗಲಿದೆ. ರಾಜ್ಯದ ರೈತರು ವಿಷ ನೀಡ್ತೀರೋ, ಅನ್ನ ನೀಡ್ತೀರೋ ನಿಮಗೆ ಬಿಟ್ಟ ವಿಚಾರ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದರು.
ಉಡುಪಿಯಲ್ಲಿ ಕುಮಾರಸ್ವಾಮಿ ನಮ್ಮ ಮುಖ್ಯಮಂತ್ರಿ ಅಲ್ಲ ಎಂದು ಪ್ಲೇ ಕಾರ್ಡ್ ಹಿಡಿದುಕೊಂಡು ಕೂಗಾಡುತ್ತಿದ್ದಾರೆ. ಆದರೆ, ನಾನು ಒಂದು ಜಿಲ್ಲೆಗೆ ಸೀಮಿತವಾದವನಲ್ಲ. 30 ಜಿಲ್ಲೆಗಳ, 6 ಕೋಟಿ ಜನರಿಗೆ ಸೇರಿದ ಮುಖ್ಯಮಂತ್ರಿ. ಹೀಗಾಗಿ, ಮುಂದಿನ 15 ದಿನಗಳಲ್ಲಿ ಉಡುಪಿಗೆ ಬರುತ್ತೇನೆ. ಒಂದು ದಿನ ನಿಮ್ಮೊಂದಿಗೆ ಇದ್ದು, ಕಷ್ಟಗಳನ್ನು ಅರ್ಥ ಮಾಡಿಕೊಳ್ಳುತ್ತೇನೆ. ಕೊಡಗಿನಲ್ಲಿ ಸರಕಾರ ನಮ್ಮನ್ನು ಮರೆತಿದೆ ಎಂದು ಯುವಕನೊಬ್ಬ ಹೇಳಿದ್ದಾರೆ. ಆದುದರಿಂದಾಗಿ, ಜು.19 ರಂದು ಕೊಡಗಿಗೆ ಭೇಟಿ ನೀಡುತ್ತಿದ್ದೇನೆ. ಎಲ್ಲರ ಸಮಸ್ಯೆಗಳನ್ನು ಅರ್ಥ ಮಾಡಿಕೊಂಡು, ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುತ್ತೇನೆ. ನಾನು ಯಾರನ್ನೂ ಕಳೆದುಕೊಳ್ಳಲು ಇಷ್ಟಪಡುವುದಿಲ್ಲ ಎಂದರು.
ಮೈಕ್ರೋ ಫೈನಾನ್ಸ್ ರೀತಿಯಲ್ಲಿ ಬಡ್ಡಿ ರಹಿತ ಸಾಲ ನೀಡಲು ಚಿಂತನೆ ನಡೆಸಲಾಗುತ್ತಿದೆ. ಅಲ್ಲದೆ, ಸರಕಾರಿ ಆಸ್ಪತ್ರೆಗಳನ್ನು ಬಲಪಡಿಸಲು ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ವರದಿ ಸಲ್ಲಿಸುವಂತೆ ಮುಖ್ಯ ಕಾರ್ಯದರ್ಶಿಗೆ ಸೂಚಿಸಲು ಸೂಚನೆ ನೀಡಿದ್ದೇನೆ. ಶಿಕ್ಷಕರ ಕೊರತೆ ಹಾಗೂ ಸಮಸ್ಯೆಗಳ ಪಟ್ಟಿ ಸಲ್ಲಿಸಬೇಕು ಎಂದು ಜಿಲ್ಲಾ ಶಿಕ್ಷಣಾಧಿಕಾರಿಗಳಿಗೆ ಸೂಚನೆ ನೀಡಿದ್ದು, ಸಭೆ ಕರೆದಿದ್ದೇನೆ. ಎಲ್ಲರೂ ಬೆಂಬಲ ನೀಡಿದರೆ ಬದಲಾವಣೆ ತರಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಎರಡು ತಿಂಗಳು ಅವಕಾಶ ನೀಡಿ: ನಾನು ಗೂಟ ಹೊಡೆದುಕೊಂಡು ಕುರ್ಚಿಯಲ್ಲಿ ಕೂತಿಲ್ಲ. ಅಲ್ಲದೆ, ಸ್ವಾಭಿಮಾನವನ್ನು ಕಳೆದುಕೊಳ್ಳಲು ಇಷ್ಟಪಡುವುದಿಲ್ಲ. ಬಿಜೆಪಿ ನಾಯಕರು ಸಂಕುಚಿತ ಮನೋಭಾವದಿಂದ ಹೊರಗೆ ಬರಬೇಕು. ಮುಂದಿನ ಎರಡು ತಿಂಗಳ ಅವಧಿಯಲ್ಲಿ ಎಲ್ಲವೂ ಸರಿಯಾಗುತ್ತದೆ. ಅಲ್ಲಿಯವರೆಗೂ ಸಮಾಧಾನದಿಂದ ಇರಬೇಕು. ನಾನು ಎಲ್ಲವನ್ನೂ ಸುಮ್ಮನೆ ಘೋಷಣೆ ಮಾಡಿಲ್ಲ. ಮಾಡಿರುವ ಎಲ್ಲ ಯೋಜನೆಗಳನ್ನು ಈಡೇರಿಸುತ್ತೇನೆ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ತಿಳಿಸಿದರು.
ಸಮ್ಮಿಶ್ರ ಸರಕಾರದ ಕಾರ್ಯಕ್ರಮಗಳನ್ನು ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತರೂ ಜನರಿಗೆ ತಿಳಿಸುವ ಕೆಲಸ ಮಾಡಬೇಕು. ಅದನ್ನು ಬಿಟ್ಟು, ನಿಗಮ ಮಂಡಳಿಗಳಲ್ಲಿ ಸ್ಥಾನಕ್ಕಾಗಿ ನನ್ನ ಹತ್ತಿರ ಬರಬೇಡಿ. ನಮ್ಮದೇ ಸ್ವತಂತ್ರ ಸರಕಾರ ಬಂದ ಸಂದರ್ಭದಲ್ಲಿ ಪಕ್ಷಕ್ಕಾಗಿ ದುಡಿದ ಎಲ್ಲರಿಗೂ ಅವಕಾಶ ಸಿಗುತ್ತದೆ. 15 ದಿನಕ್ಕೊಮ್ಮೆ ಪಕ್ಷದ ಕಚೇರಿಯಲ್ಲಿ ಸಿಗುತ್ತೇನೆ. ಸಾಮಾನ್ಯ ಜನರ ಸಮಸ್ಯೆಗಳನ್ನು ಆಲಿಸುತ್ತೇನೆ. ಪಕ್ಷದ ಕಾರ್ಯಕರ್ತರು ವಿಧಾನಸೌಧಕ್ಕೆ ಅಲೆಯಬೇಕಾದ ಅಗತ್ಯವಿಲ್ಲ.
-ಎಚ್.ಡಿ.ಕುಮಾರಸ್ವಾಮಿ, ಮುಖ್ಯಮಂತ್ರಿ







