ಲೇಡಿಗೋಶನ್ ಆಸ್ಪತ್ರೆಗೆ ಮೊಯ್ಲಿ ನೇತೃತ್ವದ ಸಂಸದೀಯ ಸ್ಥಾಯಿ ಸಮಿತಿ ಭೇಟಿ

ಮಂಗಳೂರು, ಜು.14: ಸರಕಾರಿ ಲೇಡಿಗೋಶನ್ ಆಸ್ಪತ್ರೆಯ ಹೊಸ ಕಟ್ಟಡಕ್ಕೆ ಸಂಸತ್ ಹಣಕಾಸು ಸ್ಥಾಯಿ ಸಮಿತಿ ಅಧ್ಯಕ್ಷ ಡಾ.ವೀರಪ್ಪಮೊಯ್ಲಿ ನೇತೃತ್ವದ ತಂಡ ಶನಿವಾರ ಸಂಜೆ ಭೇಟಿ ನೀಡಿ, ಪರಿಶೀಲನೆ ನಡೆಸಿತು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಡಾ.ವೀರಪ್ಪಮೊಯ್ಲಿ, ಹೊಸ ಲೇಡಿಗೋಷನ್ ಕಟ್ಟಡ ಬಹಳ ಉತ್ತಮವಾದ ಯೋಜನೆಯಾಗಿದೆ. 1.5 ಕೋಟಿ ರೂ. ವೆಚ್ಚದಲ್ಲಿ ಆಸ್ಪತ್ರೆಗೆ ಸಲಕರಣೆಗಳನ್ನು ಎಂಆರ್‌ಪಿಎಲ್ ಸಂಸ್ಥೆ ನೀಡಲಾಗಿದೆ. ಆಸ್ಪತ್ರೆಯ ಸಲಕರಣೆಗಳಿಗೆ ಸಂಸ್ಥೆ ಸ್ವಯಂ ಆಗಿ 5 ಕೋಟಿ ರೂ. ಹೆಚ್ಚುವರಿಯಾಗಿ ನೀಡಲಿದೆ. ಸಮೀಪದ 8 ಜಿಲ್ಲೆಗಳಿಗೆ ಈ ಆಸ್ಪತ್ರೆಯಿಂದ ಪ್ರಯೋಜನ ಸಿಗಲಿದೆ ಎಂದು ಅವರು ತಿಳಿಸಿದರು.
ಆಸ್ಪತ್ರೆ ಕಟ್ಟಡದ ಇನ್ನು ಕೆಲ ಕಾಮಗಾರಿಗಳು ನಡೆಯಬೇಕಿದೆ. ಕಟ್ಟಡದ ಕಾಮಗಾರಿ ಹಾಗೂ ಮೂಲಭೂತ ಸೌಕರ್ಯಗಳಾದ ಬಳಿಕ ಕೇಂದ್ರ ಪೆಟ್ರೋಲಿಯಂ ಸಚಿವ, ಆರೋಗ್ಯ ಸಚಿವ, ಉಸ್ತುವಾರಿ ಸಚಿವರ ದಿನ ನಿಗದಿ ಮಾಡಲಿದ್ದರೆ. ಶೀಘ್ರವೇ ಉದ್ಘಾಟನಾ ಸಮಾರಂಭ ನಡೆಯಲಿದೆ ಎಂದು ತಿಳಿಸಿದರು.
ಸಂಸತ್ ಹಣಕಾಸು ಸ್ಥಾಯಿ ಸಮಿತಿ ಸದಸ್ಯರು ಕೆನರಾ ಚೇಂಬರ್ ಆ್ ಕಾಮರ್ಸ್ ಅವರೊಂದಿಗೆ ಜಿಎಸ್‌ಟಿ, ಎಂಆರ್‌ಎ ಸಿಆರ್‌ಎಸ್ ಕಾರ್ಯಕ್ರಮಗಳ ಕುರಿತು ಚರ್ಚೆ ಮಾಡಲಾಗಿದೆ. ಸೋಮವಾರ ಆದಾಯ ತೆರಿಗೆ, ಎಸ್‌ಇಝೆಡ್, ಹೆದ್ದಾರಿ ಪ್ರಾಧಿಕಾರ ವಿಮರ್ಶೆ, ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಬಂದರು ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಲಾಗುವುದು ಎಂದು ಅವರು ತಿಳಿಸಿದರು.
ಆಸ್ಪತ್ರೆಗಳಲ್ಲಿರುವ ಸಿಬ್ಬಂದಿಯ ಕೊರತೆ ನೀಗಿಸಲು ಕೆಎಂಸಿ ಆಸ್ಪತ್ರೆಯಿಂದ 100 ವೈದ್ಯರು ಹಾಗೂ 53 ನರ್ಸ್‌ಗಳು ಈಗಾಗಲೇ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಎಂಆರ್‌ಪಿಎಲ್‌ನ ವ್ಯವಸ್ಥಾಪಕ ನಿರ್ದೇಶಕ ವೆಂಕಟೇಶ್, ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್, ಸಂಸತ್ ಹಣಕಾಸು ಸ್ಥಾಯಿ ಸಮಿತಿ ಸದಸ್ಯರಾದ ಶಿವಕುಮಾರ್ ಉದಾಸಿ, ಪಿ.ಸಿ.ಗಡ್ಡಿ ಗೌಡರ್, ಚಂದ್ರಕಾಂತ್ ಕೈರೇ, ಭಾತ್ರುಹರಿ ಮಹ್ತಬ್, ಪ್ರೊ.ಸೌಗತ್ ರಾಯ್, ನಿಶಿಕಾಂತ್ ದುಬೆ, ವೆಂಕಟೇಶ್ ಬಾಬು ಟಿ.ಜಿ, ಶ್ಯಾಮ್‌ಚರಣ್ ಗುಪ್ತ, ರತನ್ ಲಾಲ್ ಕಟಾರಿಯಾ, ಕುನ್ವಾರ್ ಪುಷ್ಪೇಂದ್ರ ಸಿಂಗ್ ಚಂಡೆಲ್, ಡಾ.ಮಹೇಂದ್ರ ಪ್ರಸಾದ್, ಅನಿಲ್ ದೇಸಾಯಿ ಮೊದಲಾದವರು ಉಪಸ್ಥಿತರಿದ್ದರು.
ಕುಂದುಕೊರತೆ ಆಲಿಸಿದ ಮೊಯ್ಲಿ:
ಈ ಸಂದರ್ಭ ಅಲ್ಲಿದ್ದ ಗರ್ಭಿಣಿಯರ ಜತೆಗೆ ಮಾತನಾಡಿ ಅವರ ಕುಂದುಕೊರತೆಗಳನ್ನು ಆಲಿಸಿದರು. ನಂತರ ಹೊಸ ಲೇಡಿಗೋಷನ್ ಕಟ್ಟಡಕ್ಕೆ ಭೇಟಿ ನೀಡಿದ ಸಮಿತಿ ಸದಸ್ಯರು ಕಟ್ಟಡದೊಳಗೆ ಇರುವ ಎಲ್ಲ ವಿಭಾಗಗಳನ್ನು ಪರಿಶೀಲನೆ ನಡೆಸಿ ಲೇಡಿಗೋಷನ್‌ನ ವೈದ್ಯಾಧಿಕಾರಿ ಡಾ. ಸವಿತಾ ಹಾಗೂ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಜತೆಯಲ್ಲಿ ಚರ್ಚಿಸಿ ಹಳೆಯ ಕಟ್ಟಡದ ಸಮಸ್ಯೆ ಹಾಗೂ ಹೊಸ ಕಟ್ಟಡದ ಕೆಲಸ ಕಾರ್ಯಗಳ ಮಾಹಿತಿ ಪಡೆದುಕೊಂಡರು.







