ಎರಡನೇ ಏಕದಿನ: ಭಾರತದ ಗೆಲುವಿಗೆ 323 ರನ್ ಗುರಿ
ಜೋ ರೂಟ್ ಶತಕ

ಲಂಡನ್, ಜು.14: ಜೋ ರೂಟ್ ಶತಕ(113), ನಾಯಕ ಇಯಾನ್ ಮೊರ್ಗನ್(53)ಹಾಗೂ ಡೇವಿಡ್ ವಿಲ್ಲಿ(ಔಟಾಗದೆ 50) ಅರ್ಧಶತಕದ ಬೆಂಬಲದಿಂದ ಇಂಗ್ಲೆಂಡ್ ತಂಡ ಎರಡನೇ ಏಕದಿನ ಪಂದ್ಯದಲ್ಲಿ ಭಾರತದ ಗೆಲುವಿಗೆ 323 ರನ್ ಕಠಿಣ ಗುರಿ ನೀಡಿದೆ.
ಶನಿವಾರ ಇಲ್ಲಿ ನಡೆದ ಸರಣಿ ನಿರ್ಣಾಯಕ ಪಂದ್ಯದಲ್ಲಿ ಟಾಸ್ ಜಯಿಸಿದ ಇಂಗ್ಲೆಂಡ್ ಮೊದಲು ಬ್ಯಾಟಿಂಗ್ ಆಯ್ದುಕೊಂಡಿತು. ನಿಗದಿತ 50 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 322 ರನ್ ಗಳಿಸಿತು.
ಇನಿಂಗ್ಸ್ ಆರಂಭಿಸಿದ ಜೇಸನ್ ರಾಯ್(40) ಹಾಗೂ ಬೈರ್‌ಸ್ಟೋವ್(38) ಮೊದಲ ವಿಕೆಟ್‌ಗೆ 69 ರನ್ ಜೊತೆಯಾಟ ನಡೆಸಿ ಉತ್ತಮ ಆರಂಭ ನೀಡಿದರು. ಈ ಜೋಡಿಯನ್ನು ಭಾರತದ ಸ್ಪಿನ್ನರ್ ಕುಲ್‌ದೀಪ್ ಯಾದವ್(3-68) ಬೇರ್ಪಡಿಸಿದರು.
ಬೈರ್‌ಸ್ಟೋವ್ ಔಟಾದ ಬಳಿಕ ಬೆನ್ನಿಗೆ ರಾಯ್ ಪೆವಿಲಿಯನ್ ಸೇರಿದರು. ಆಗ ನಾಯಕ ಮೊರ್ಗನ್‌ರೊಂದಿಗೆ ಕೈಜೋಡಿಸಿದ ಶತಕವೀರ ರೂಟ್(113, 116 ಎಸೆತ, 8 ಬೌಂಡರಿ, 1 ಸಿಕ್ಸರ್)3ನೇ ವಿಕೆಟ್‌ಗೆ 103 ರನ್ ಸೇರಿಸಿ ತಂಡವನ್ನು ಆಧರಿಸಿದರು.
ಮೊರ್ಗನ್ 53 ರನ್‌ಗೆ ಔಟಾದರು. ಬೆನ್ ಸ್ಟೋಕ್ಸ್(5), ಜೋಸ್ ಬಟ್ಲರ್(4) ಹಾಗೂ ಮೊಯಿನ್ ಅಲಿ(13) ಬೇಗನೇ ಔಟಾದರು. ಡೇವಿಡ್ ವಿಲ್ಲಿ(ಔಟಾಗದೆ 50, 31 ಎಸೆತ, 5 ಬೌಂಡರಿ, 1 ಸಿಕ್ಸರ್) ಅವರೊಂದಿಗೆ 7ನೇ ವಿಕೆಟ್‌ಗೆ 83 ರನ್ ಜೊತೆಯಾಟ ನಡೆಸಿದ ರೂಟ್ ತಂಡದ ಮೊತ್ತವನ್ನು 322ಕ್ಕೆ ತಲುಪಿಸಿದರು. ರೂಟ್ ಇನಿಂಗ್ಸ್‌ನ ಕೊನೆಯ ಎಸೆತದಲ್ಲಿ ವಿಕೆಟ್‌ಕೀಪರ್ ಎಂ.ಎಸ್. ಧೋನಿಯಿಂದ ರನೌಟಾದರು.
ಭಾರತದ ಪರ ಕುಲ್‌ದೀಪ್ ಯಾದವ್(3-68) ಯಶಸ್ವಿ ಬೌಲರ್ ಎನಿಸಿಕೊಂಡರು. ಉಮೇಶ್ ಯಾದವ್(1-63), ಹಾರ್ದಿಕ್ ಪಾಂಡ್ಯ(1-70) ಹಾಗೂ ಚಹಾಲ್(1-43)ತಲಾ ಒಂದು ವಿಕೆಟ್ ಪಡೆದರು.
ಮೂರು ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆಯಲ್ಲಿರುವ ಭಾರತ ಎರಡನೇ ಪಂದ್ಯ ಗೆಲ್ಲಲು ಕಠಿಣ ಸವಾಲು ಪಡೆದಿದೆ.







