ವೈದ್ಯಕೀಯ ಕೋರ್ಸ್‌ಗಳ ಪ್ರವೇಶ ಶುಲ್ಕ ಹೆಚ್ಚಳ ಕೈಬಿಡಲು ಬಿಜೆಪಿ ಆಗ್ರಹ

ಬೆಂಗಳೂರು, ಜು. 14: ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸ್ ಪ್ರವೇಶ ಶುಲ್ಕವನ್ನು ಏಕಾಏಕಿ ಹೆಚ್ಚಿಸಿರುವ ರಾಜ್ಯ ಸರಕಾರದ ಕ್ರಮದಿಂದ ಬಡ ಮತ್ತು ಗ್ರಾಮೀಣ ವಿದ್ಯಾರ್ಥಿಗಳಿಗೆ ತೀವ್ರ ತೊಂದರೆಯಾಗಿದ್ದು, ಕೂಡಲೇ ಶುಲ್ಕ ಹೆಚ್ಚಳವನ್ನು ಕೈಬಿಡಬೇಕು ಎಂದು ಬಿಜೆಪಿ ಆಗ್ರಹಿಸಿದೆ.
ಶುಲ್ಕ ಹೆಚ್ಚಳದಿಂದ ಗ್ರಾಮೀಣ ವಿದ್ಯಾರ್ಥಿಗಳು ಉನ್ನತ ಶಿಕ್ಷಣದಿಂದ ವಂಚಿತರಾಗುವ ಸಂಭವವಿದೆ. ಇದರಿಂದ ಬಡ ಪೋಷಕರಿಗೆ ಶುಲ್ಕವನ್ನು ಭರಿಸಲು ಸಾಧ್ಯವಾಗದೆ ತಮ್ಮ ಮಕ್ಕಳ ವಿದ್ಯಾಭ್ಯಾಸಕ್ಕೆ ತಡೆ ಹಾಕಬೇಕಾದ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂದು ಬಿಜೆಪಿ ಕಾರ್ಯದರ್ಶಿ ರವಿಕುಮಾರ್ ಹೇಳಿದ್ದಾರೆ.
ವೈದ್ಯಕೀಯ ಕೋರ್ಸ್‌ಗಳಿಗೆ ಸರಕಾರ ಈ ಹಿಂದೆ 16,700 ರೂ.ಶುಲ್ಕವಿತ್ತು. ಆದರೆ, ಅದನ್ನು ಇದೀಗ ಶೇ.300ರಷ್ಟು ಹೆಚ್ಚಿಸಿದ್ದು, 50 ಸಾವಿರ ರೂ.ಗಳಾಗಿದ್ದು, ಇದು ಯಾವುದೇ ರೀತಿಯಿಂದಲೂ ಸಮರ್ಥನೀಯವಲ್ಲ. ಖಾಸಗಿ ಕಾಲೇಜಿನಲ್ಲಿ ಸರಕಾರಿ ಕೋಟಾದ ಸೀಟುಗಳ ಶುಲ್ಕವೂ 77 ಸಾವಿರ ರೂ.ಗಳಿಂದ 97,350 ರೂ.ಗಳಿಗೆ ಹೆಚ್ಚಳ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಅದೇ ರೀತಿ ದಂತ ವೈದ್ಯಕೀಯ ಕೋರ್ಸ್ ಶುಲ್ಕ 14,400 ರೂ.ಗಳಿಂದ 40 ಸಾವಿರ ರೂ.ಗಳಿಗೆ ಶೇ.250ರಷ್ಟು ಹೆಚ್ಚಳ ಮಾಡಿದ್ದು, ಖಾಸಗಿ ಕಾಲೇಜುಗಳಲ್ಲಿ ಸರಕಾರಿ ಕೋಟಾದ ಸೀಟುಗಳ ಶುಲ್ಕವೂ 49,500 ರೂ.ಗಳಿಂದ 63,030 ರೂ.ಗಳಿಗೆ ಹೆಚ್ಚಿಸಲಾಗಿದೆ ಎಂದು ಹೇಳಿದ್ದಾರೆ.
ಶುಲ್ಕ ಹೆಚ್ಚಳದ ಮೂಲಕ ಸರಕಾರ ಬಡ ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಬರೆ ಎಳೆದಿದೆ. ಇದರಿಂದ ಸರಕಾರವು ಬಡವರ ಪರ ಮತ್ತು ರೈತರ ಪರ ಎಂದು ಹೇಳಿಕೊಳ್ಳುವುದು ಬರೀ ಬೊಗಳೆ ಎನ್ನುವುದು ಸಾಬೀತಾಗಿದೆ. ತಕ್ಷಣವೇ ಶುಲ್ಕ ಹೆಚ್ಚಳವನ್ನು ಕೈಬಿಡಬೇಕು ಎಂದು ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.







