ಹಿರಿಯ ಪತ್ರಕರ್ತ ಯಾಗ್ನಿಕ್ ನಿಧನಕ್ಕೆ ಹೃದಯಾಘಾತ ಕಾರಣವಲ್ಲ: ಡಿಜಿಪಿ ಸ್ಪಷ್ಟನೆ

ಇಂದೋರ್, ಜು.14: ಶುಕ್ರವಾರ ಮೃತಪಟ್ಟಿರುವ ಹಿರಿಯ ಪತ್ರಕರ್ತ ಕಲ್ಪೇಶ್ ಯಾಗ್ನಿಕ್ ಅವರು ಕಟ್ಟಡವೊಂದರಿಂದ ಕೆಳಗೆ ಬಿದ್ದು ಮೃತಪಟ್ಟಿರುವುದಾಗಿ ಪೊಲೀಸರು ಸ್ಪಷ್ಟಪಡಿಸಿದ್ದಾರೆ. 55ರ ಹರೆಯದ ಯಾಗ್ನಿಕ್ ಹೃದಯಾಘಾತದಿಂದ ಮೃತಪಟ್ಟಿರುವುದಾಗಿ ಮೊದಲು ಹೇಳಲಾಗಿತ್ತು. ಮೂರು ಮಹಡಿಯ ಕಟ್ಟಡದ ಟೆರೇಸ್‌ನಿಂದ ಕೆಳ ಬಿದ್ದು ಯಾಗ್ನಿಕ್ ಮೃತಪಟ್ಟಿದ್ದಾರೆ. ಪ್ರಕರಣದ ಕುರಿತು ತನಿಖೆಗೆ ಆದೇಶಿಸಲಾಗಿದೆ ಎಂದು ಪೊಲೀಸ್ ಮಹಾನಿರ್ದೇಶಕ ನಾರಾಯಣ್ ಚಾರಿ ಮಿಶ್ರಾ ತಿಳಿಸಿದ್ದಾರೆ.
‘ದೈನಿಕ್ ಭಾಸ್ಕರ್’ ಪತ್ರಿಕೆಯ ಗ್ರೂಪ್ ಎಡಿಟರ್ ಆಗಿದ್ದ ಯಾಗ್ನಿಕ್ ಗುರುವಾರ ಪತ್ರಿಕೆಯ ಇಂದೋರ್ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ವೇಳೆ ರಾತ್ರಿ 10:30ಕ್ಕೆ ತೀವ್ರ ಹೃದಯಾಘಾತಕ್ಕೆ ಒಳಗಾದರು. ಅವರನ್ನು ತಕ್ಷಣ ಸ್ಥಳೀಯಆಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆಯ ಬಳಿಕ ಚೇತರಿಸಿಕೊಂಡಿದ್ದರು. ಆದರೆ ಮತ್ತೆ ತೀವ್ರವಾದ ಹೃದಯಾಘಾತ ಸಂಭವಿಸಿದ ಕಾರಣ ಮಧ್ಯರಾತ್ರಿ 2:30ರ ಸುಮಾರಿಗೆ ನಿಧನರಾಗಿದ್ದಾರೆ ಎಂದು ಈ ಹಿಂದೆ ವರದಿಯಾಗಿತ್ತು.
1998ರಿಂದಲೂ ಪತ್ರಿಕೆಯ ಒಡನಾಡಿಯಾಗಿದ್ದ ಯಾಗ್ನಿಕ್ ಸಾಮಾಜಿಕ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲುವ ಲೇಖನ ಬರೆಯುವುದರಲ್ಲಿ ಸಿದ್ಧಹಸ್ತರಾಗಿದ್ದರು.





