168 ಸರಕಾರಿ ಕಟ್ಟಡಗಳಲ್ಲಿ ಅಂಗವಿಕಲರ ಪ್ರವೇಶಕ್ಕಾಗಿ ಸೌಲಭ್ಯ ಕಲ್ಪಿಸಿದ ಸಿಪಿಡಬ್ಲ್ಯುಡಿ

ಹೊಸದಿಲ್ಲಿ,ಜು.14: ಕೇಂದ್ರ ಲೋಕೋಪಯೋಗಿ ಇಲಾಖೆ(ಸಿಪಿಡಬ್ಲ್ಯುಡಿ)ಯು ಅಂಗವಿಕಲ ವ್ಯಕ್ತಿಗಳ ಸಬಲೀಕರಣ ಇಲಾಖೆಯ ‘ಅಸೆಸಿಬಲ್ ಇಂಡಿಯಾ’ ಅಭಿಯಾನದಡಿ ಈವರೆಗೆ 219 ಕೇಂದ್ರ ಸರಕಾರಿ ಕಟ್ಟಡಗಳ ಪೈಕಿ 168ರಲ್ಲಿ ಅಂಗವಿಕಲ ವ್ಯಕ್ತಿಗಳು ಸರಾಗವಾಗಿ ಪ್ರವೇಶಿಸಲು ಸಾಧ್ಯವಾಗುವಂತೆ ಸೌಲಭ್ಯಗಳನ್ನು ನಿರ್ಮಿಸಿದೆ.
ಬಾಕಿಯುಳಿದಿರುವ 51 ಕೇಂದ್ರ ಸರಕಾರಿ ಕಟ್ಟಡಗಳನ್ನು ಅಂಗವಿಕಲ ಸ್ನೇಹಿಯಾಗಿಸುವ ಕಾರ್ಯವು ಈ ವರ್ಷದ ಆಗಸ್ಟ್‌ನೊಳಗೆ ಪೂರ್ಣಗೊಳ್ಳಲಿದೆ ಎಂದು ಸಿಪಿಡಬ್ಲುಡಿ ತಿಳಿಸಿದೆ.
ತಮ್ಮ ಕಟ್ಟಡಗಳನ್ನು ಅಂಗವಿಕಲ ಸ್ನೇಹಿಯಾಗಿಸಲು ಸಂಬಂಧಿತ ಇಲಾಖೆಗಳಿಗೆ ಅಂದಾಜು ಯೋಜನೆಗಳನ್ನು ನಾವು ಸಲ್ಲಿಸಿದ್ದೇವೆ. ರ್ಯಾಂಪ್‌ಗಳ ಸ್ಥಾಪನೆ,ಬ್ರೈಲ್ ಲಿಪಿಗಾಗಿ ಫಲಕಗಳು ಇತ್ಯಾದಿಗಳು ಈ ಸೌಲಭ್ಯಗಳಲ್ಲಿ ಸೇರಿವೆ ಎಂದು ಸಿಪಿಡಬ್ಲುಡಿಯ ಮಹಾ ನಿರ್ದೇಶಕ ಪ್ರಭಾಕರ ಸಿಂಗ್ ಅವರು ಸುದ್ದಿಗಾರರಿಗೆ ತಿಳಿಸಿದರು.
ಸರಕಾರಿ ಕಟ್ಟಡಗಳಲ್ಲಿ ನವೀಕರಿಸಬಹುದಾದ ಶಕ್ತಿ ಉತ್ಪಾದನೆಗಾಗಿಯೂ ಸಿಪಿಡಬ್ಲ್ಯುಡಿ ಉಪಕ್ರಮಗಳನ್ನು ಕೈಗೊಂಡಿದೆ. ದೇಶಾದ್ಯಂತ 40 ಸರಕಾರಿ ಕಟ್ಟಡಗಳಲ್ಲಿ 5.3 ಎಂವಿವಿಪಿ ಸಾಮರ್ಥ್ಯದ ಸೌರ ವಿದ್ಯುತ್ ಘಟಕಗಳನ್ನು ಅದು ಸ್ಥಾಪಿಸಿದೆ.





