ಮಹಾರಾಷ್ಟ್ರ ಶಾಲೆಯ ಅಡುಗೆಕೋಣೆಯಲ್ಲಿ 60 ವಿಷಕಾರಿ ಹಾವುಗಳು ಪತ್ತೆ

ಔರಂಗಬಾದ್, ಜು.14: ಮಹಾರಾಷ್ಟರದ ಹಿಂಗೊಲಿ ಜಿಲ್ಲೆಯ ಜಿಲ್ಲಾ ಪರಿಷದ್ ಶಾಲೆಯ ಅಡುಗೆಕೋಣೆಯಲ್ಲಿ 60 ವಿಷಕಾರಿ ಮಂಡಲದ ಹಾವುಗಳು ಪತ್ತೆಯಾಗಿವೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ. ಒಂದೇ ಕೋಣೆಯಲ್ಲಿ ಇಷ್ಟೊಂದು ಸಂಖ್ಯೆಯಲ್ಲಿ ವಿಷಕಾರಿ ಹಾವುಗಳು ಪತ್ತೆಯಾಗಿರುವುದರಿಂದ ಶಾಲೆಯ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ಸೇರಿದಂತೆ ಗ್ರಾಮಸ್ಥರು ಕೂಡಾ ಆತಂಕಿತರಗಿದ್ದಾರೆ. ಶಾಲೆಯಲ್ಲಿ ಅಡುಗೆ ಮಾಡುವ ಮಹಿಳೆ ಒಲೆ ಹಚ್ಚಲು ಕಟ್ಟಿಗೆ ಇಟ್ಟಿದ್ದ ಕೋಣೆಯಲ್ಲಿ ಕಟ್ಟಿಗೆ ತೆಗೆಯುವ ವೇಳೆ ಎರಡು ಹಾವುಗಳನ್ನು ಕಂಡಿದ್ದರು. ನಂತರ ಆಕೆ ಇನ್ನಷ್ಟು ಕಟ್ಟಿಗೆಗಳನ್ನು ತೆಗೆದು ನೋಡಿದಾಗ ಉಳಿದ 58 ಹಾವುಗಳು ಪತ್ತೆಯಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಸ್ಥಳೀಯರು ದೊಣ್ಣೆ ಮತ್ತು ಕಲ್ಲುಗಳಿಂದ ಹಾವುಗಳನ್ನು ಕೊಲ್ಲಲು ಮುಂದಾದಾಗ ಅವರನ್ನು ತಡೆದ ಶಾಲೆಯ ಮುಖ್ಯೋಪಾಧ್ಯಾಯರಾದ ತ್ರೈಂಬಕೇಶ್ವರ ಭೋಂಸ್ಲೆ, ಹಾವು ಹಿಡಿಯುವ ವಿಕ್ಕಿ ದಲಾಲ್ ಎಂಬವರಿಗೆ ಕರೆ ಮಾಡಿ ಹಾವುಗಳನ್ನು ಸುರಕ್ಷಿತವಾಗಿ ಸ್ಥಳಾಂತರಿಸಿದ್ದಾರೆ. ಇಷ್ಟು ಹಾವುಗಳನ್ನು ಹಿಡಿಯಲು ಸತತ ಎರಡು ಗಂಟೆಗಳ ಕಾಲ ಶ್ರಮಿಸಿದ ದಲಾಲ್ ಕೊನೆಗೂ ಎಲ್ಲ ಹಾವುಗಳನ್ನು ಬಾಟಲಿಗಳೊಳಗೆ ಹಾಕುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.





