ನವಾಝ್ ಶರೀಫ್ ಬೆಂಬಲಿಗರು, ಪೊಲೀಸರ ನಡುವೆ ಘರ್ಷಣೆ
ಕನಿಷ್ಠ 50 ಮಂದಿಗೆ ಗಾಯ

ಇಸ್ಲಾಮಾಬಾದ್, ಜು. 14: ಪಾಕಿಸ್ತಾನದ ಮಾಜಿ ಪ್ರಧಾನಿ ನವಾಝ್ ಶರೀಫ್ ಮತ್ತು ಅವರ ಪುತ್ರಿ ಮರ್ಯಮ್ ಬಂಧನವನ್ನು ವಿರೋಧಿಸಿ ಪಾಕಿಸ್ತಾನದ ಪಂಜಾಬ್ ರಾಜ್ಯದಲ್ಲಿ ಅವರ ಬೆಂಬಲಿಗರು ಶುಕ್ರವಾರ ರಾತ್ರಿ ಬೃಹತ್ ಪ್ರತಿಭಟನಾ ಮೆರವಣಿಗೆಗಳನ್ನು ನಡೆಸಿದರು.
ಶುಕ್ರವಾರ ರಾತ್ರಿ ಲಾಹೋರ್ ವಿಮಾನ ನಿಲ್ದಾಣದಲ್ಲಿ ಶರೀಫ್ ಮತ್ತು ಅವರ ಮಗಳನ್ನು ಪೊಲೀಸರು ಬಂಧಿಸಿರುವುದನ್ನು ಸ್ಮರಿಸಬಹುದಾಗಿದೆ.
ಪ್ರತಿಭಟನಕಾರರನ್ನು ಪೊಲೀಸರು ತಡೆದಾಗ ಪಿಎಂಎಲ್-ಎನ್ ಕಾರ್ಯಕರ್ತರು ಮತ್ತು ಪೊಲೀಸರ ನಡುವೆ ಘರ್ಷಣೆ ಸಂಭವಿಸಿತು. ಘರ್ಷಣೆಯಲ್ಲಿ 20 ಪೊಲೀಸರು ಸೇರಿದಂತೆ ಕನಿಷ್ಠ 50 ಮಂದಿ ಗಾಯಗೊಂಡಿದ್ದಾರೆ.
ಲಾಹೋರ್ ವಿಮಾನ ನಿಲ್ದಾಣದಿಂದ ಸುಮಾರು 5 ಕಿಲೋಮೀಟರ್ ದೂರದ ಜೊರಾಯ್ ಪುಲ್ ಎಂಬಲ್ಲಿ ಪಿಎಂಎಲ್-ಎನ್ ಕಾರ್ಯಕರ್ತರ ಮೆರವಣಿಗೆಯನ್ನು ಪೊಲೀಸರು ನಿಲ್ಲಿಸಿದಾಗ, ಕಾರ್ಯಕರ್ತರು, ಪೊಲೀಸರು ಮತ್ತು ರೇಂಜರ್‌ಗಳ ನಡುವೆ ದೊಡ್ಡ ಮಟ್ಟದಲ್ಲಿ ಘರ್ಷಣೆಗಳು ಸಂಭವಿಸಿದವು. ಶರೀಫ್ ಬೆಂಬಲಿಗರ ಮೇಲೆ ಪೊಲೀಸರು ಅಶ್ರುವಾಯು ಸಿಡಿಸಿದಾಗ, ಪ್ರತಿಭಟನಕಾರರು ಪೊಲೀಸರ ಮೇಲೆ ಕಲ್ಲುಗಳನ್ನು ಎಸೆದರು.





