ಜಯಕರ್ನಾಟಕ ಮುಖಂಡನಿಂದ ಕಾರು ಚಾಲಕನ ಮೇಲೆ ಗುಂಡು ಹಾರಾಟ: ಆರೋಪ

ಮೈಸೂರು, ಜು.14: ಟ್ರಾವೆಲ್ ಏಜೆನ್ಸಿಯೊಂದರ ಚಾಲಕ ತನ್ನ ಪ್ರಯಾಣಿಕರಿಗಾಗಿ ಕಾಯುತ್ತಾ ಕಾರು ನಿಲ್ಲಿಸಿಕೊಂಡಿದ್ದ ವೇಳೆ, ಪಾನಮತ್ತನಾಗಿ ನಶೆಯಲ್ಲಿದ್ದ ವ್ಯಕ್ತಿಯೋರ್ವ ಬಂದು ಚಾಲಕನನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೆ, ಹಲ್ಲೆ ನಡೆಸಿ ರಿವಾಲ್ವರ್ ನಿಂದ ಯದ್ವಾತದ್ವಾ ಗುಂಡು ಹಾರಿಸಿದ ಘಟನೆ ವಿಜಯನಗರ ನಾಲ್ಕನೇ ಹಂತದಲ್ಲಿ ನಡೆದಿದೆ ಎನ್ನಲಾಗಿದೆ.
ಕಂಠಪೂರ್ತಿ ಕುಡಿದು ಅಸಭ್ಯವಾಗಿ ವರ್ತಿಸಿದ ವ್ಯಕ್ತಿಯನ್ನು ಜೈ ಕರ್ನಾಟಕ ಸಂಘಟನೆಯ ಮುಖಂಡ ಎಂದು ಹೇಳಲಾಗಿದ್ದು, ಈತ ಬಿಐಟಿ ಟ್ರಾವೆಲ್ ಏಜೆನ್ಸಿಯ ಕಾರಿನ ಚಾಲಕ ರಘು ಎಂಬವರು ವಿಜಯನಗರದ ನಾಲ್ಕನೇ ಹಂತದಲ್ಲಿ ಪ್ರಯಾಣಿಕರಿಗಾಗಿ ಕಾದು ನಿಂತಿದ್ದ ವೇಳೆ ಅವರ ಬಳಿ ಬಂದು ಯಾಕ್ಕೆ ಇಲ್ಲಿ ನಿಂತಿದ್ದೀಯಾ ಎಂದು ಪ್ರಶ್ನಿಸಿ, ಅವಾಚ್ಯ ಶಬ್ದಗಳಿಂದ ಬೈದು ಅವರ ಮೇಲೆ ಹಲ್ಲೆ ನಡೆಸಿ, ತನ್ನ ಕಿಸೆಯಲ್ಲಿದ್ದ ರಿವಾಲ್ವರ್ ಹೊರ ತೆಗೆದು ಯದ್ವಾತದ್ವಾ ಗುಂಡು ಹಾರಿಸಿದ್ದಾನೆ ಎನ್ನಲಾಗಿದೆ.
ತಕ್ಷಣವೇ ರಘು ವಿಜಯನಗರ ಪೊಲೀಸ್ ಠಾಣೆಗೆ ಬಂದು ಮಾಹಿತಿ ನೀಡಿದ್ದು, ಪೊಲೀಸರು ಸ್ಥಳಕ್ಕೆ ತೆರಳಿ ಹೋಗಿ ನೋಡಿದಾಗ ಇನ್ನೋವಾ ಕಾರಿನಲ್ಲಿ ತೆರಳಿ ಸ್ವಲ್ಪ ದೂರದಲ್ಲೇ ಬಿದ್ದು ಕೊಂಡಿದ್ದ. ಪೊಲೀಸರು ಆತನನ್ನು ಜೈಕರ್ನಾಟಕ ಸಂಘಟನೆಯ ಮುಖಂಡ ಎಂದು ಹೇಳಿದ್ದಾರೆ.
ಈ ಸಂಬಂಧ ಪೊಲೀಸರು ಆತನನ್ನು ಠಾಣೆಗೆ ಕರೆದುಕೊಂಡು ಹೋಗಿ ವಿಚಾರಣೆ ನಡೆಸಿ ಮೂರು ಸಜೀವ ಗುಂಡುಗಳನ್ನು ವಶಕ್ಕೆ ಪಡೆದಿದ್ದಾರೆ. ಈ ಕುರಿತು ಐಪಿಸಿ.307ರ ಆರ್ಮ್ಸ್ ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.







